ಮುದ್ದೇಬಿಹಾಳ: ತಾಲೂಕಿನ ತಂಗಡಗಿ ಗ್ರಾಮದ ನಿವೃತ್ತ ಶಿಕ್ಷಕ ಬಸವರಾಜ ಕುಂದಗೋಳ ಅವರ ಮನೆಯ ಹಿಂಭಾಗದಲ್ಲಿರುವ ಹಳ್ಳದ ರಸ್ತೆಯ ಬದಿಯಲ್ಲಿನ ಬೇವಿನ ಗಿಡವೊಂದರಲ್ಲಿ ಹಾಲಿನಂತ ದ್ರವ ವಸರುತ್ತಿರುವ ಘಟನೆ ಸೋಮವಾರ ಸಂಜೆ ಬೆಳಕಿಗೆ ಬಂದಿದೆ. ಕಳೆದ ಎರಡ್ಮೂರು ದಿನಗಳಿಂದ ಬಿಳಿಯ ಬಣ್ಣದ ದ್ರವ ಸುರಿಯುತ್ತಿದ್ದು, ಜನರಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಪೂಜೆ–ಪುನಸ್ಕಾರ: ವೈಜ್ಞಾನಿಕ ಮಹತ್ವ ಅರಿಯದ ಅನೇಕರು ಇದು ದೇವರ ಮಹಿಮೆ ಇರಬಹುದು ಎಂದು ಪೂಜೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಇದು ಯಾವುದರ ಸೂಚನೆ? ಎಂದು ಚರ್ಚೆಯಲ್ಲಿ ತೊಡಗಿದ್ದಾರೆ. ಸೋಮವಾರ ಸಂಜೆ ದಾರಿಹೋಕನೊಬ್ಬ ಈ ದೃಶ್ಯವನ್ನು ನೋಡಿದ್ದಾನೆ. ಬಳಿಕ ಸುದ್ದಿ ಒಬ್ಬರಿಂದೊಬ್ಬರಿಗೆ ಹರಡಿ ಸುತ್ತಮುತ್ತಲಿನ ಗ್ರಾಮಗಳ ಜನರು ಹಾಲು ಸುರಿಸುವ ಬೇವಿನ ಮರ ನೋಡಲು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ದೇವರು ಬಂದಂತೆ ನಟಿಸಿದ ಮಹಿಳೆ: ಬೇವಿನ ಮರದಲ್ಲಿ ಹಾಲಿನಂತ ದ್ರವ ಸುರಿಯುತ್ತಿರುವುದನ್ನು ತಿಳಿದ ಮಹಿಳೆಯೊಬ್ಬಳು ಅತ್ತಿಂದಿತ್ತ ಓಲಾಡುತ್ತಾ ಮೈಯ್ಯಲ್ಲಿ ದೇವರು ಬಂದವರಂತೆ ಮಾಡಿ ಮರವನ್ನು ಹಿಡಿದುಕೊಂಡು ಮಾತನಾಡಿದ್ದಾಳೆ. ಈ ಸಂದರ್ಭದ ಅದೇ ಗ್ರಾಮದ ಮಹಿಳೆ ಮಾತನಾಡಿಸಿದಾಗ, "ನಾನು ಲಕ್ಷ್ಮೀ ಕಟ್ಟೆ ಕಟ್ಟಿಸಿ ಎಂದು ಹೇಳಿದ್ದೆ, ನೀವು ಕಟ್ಟಿಸಿಲ್ಲ" ಎಂದು ಉತ್ತರಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.
ಇದು ಸಹಜ ಕ್ರಿಯೆ: ಬೇವಿನ ಮರದಲ್ಲಿ ದ್ರವ ರೂಪ ಹರಿಯುವುದು ಸಾಮಾನ್ಯ. ಇದಕ್ಕೆ ಯಾವುದೇ ದೈವ ಪವಾಡ ಅಂತ ಹೇಳುವುದು ತಪ್ಪು. ಇದೊಂದು ಸಹಜ ಕ್ರಿಯೆ. ಕೀಟಗಳಿಂದ ಎದುರಾಗುವ ರೋಗವನ್ನು ನಿಯಂತ್ರಿಸಿಕೊಳ್ಳಲು ಮರದಲ್ಲಿರುವ ದ್ರವ ನೆರವಾಗುತ್ತದೆ. ಕೀಟಗಳು ಮರದ ಕೊಂಬೆಯನ್ನು ಕಚ್ಚಿ ರಂಧ್ರ ಕೊರೆದಲ್ಲಿ, ಅವುಗಳಿಂದ ರಕ್ಷಣೆ ಪಡೆಯಲು ಕೊಂಬೆಯಿಂದ ಹೊರ ಬರುವ ದ್ರವ ಮರದ ಸ್ವಯಂರಕ್ಷಣೆಗೆ ಮುಂದಾಗುತ್ತದೆ ಎನ್ನುತ್ತಾರೆ ಸಸ್ಯ ವಿಜ್ಞಾನಿಗಳು.
ಇದನ್ನೂ ಓದಿ: ಹಂಪಿ ಎಕ್ಸ್‌ಪ್ರೆಸ್ ರೈಲಿನ ಗಾಲಿಗಳಲ್ಲಿ ಬೆಂಕಿ; 2 ಗಂಟೆ ತಡವಾಗಿ ಸಂಚಾರ