ವಿಜಯಪುರ: ಕೊರೊನಾ ಪ್ರಕರಣಗಳು ಜಿಲ್ಲೆಯಲ್ಲಿ ತಗ್ಗಿದ ಕಾರಣ ರಾಜ್ಯ ಸರ್ಕಾರ ಜಿಲ್ಲೆಯನ್ನು ಅನ್ಲಾಕ್ ಮಾಡಿದೆ. ಆದರೆ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದು, ಇಂದು ರಾತ್ರಿಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಇದು ಜಾರಿಯಲ್ಲಿ ಇರಲಿದೆ.
ಈ ಕುರಿತು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾಹಿತಿ ನೀಡಿದ್ದು, ಅಗತ್ಯ ಮತ್ತು ತುರ್ತು ಪರಿಸ್ಥಿತಿ ಹೊರತುಪಡಿಸಿ ಸಾರ್ವಜನಿಕರು ಮನೆಯಿಂದ ಹೊರಗೆ ಬರದಂತೆ ನಿರ್ಬಂಧ ಹೇರಿದ್ದಾರೆ.
ವೀಕೆಂಡ್ ಕರ್ಫ್ಯೂ ವೇಳೆ ತುರ್ತು, ಅಗತ್ಯ ಸೇವೆ, ಕೋವಿಡ್ ಕಂಟೈನ್ಮೆಂಟ್ ಝೋನ್ ನಿರ್ವಹಣಾಕಾರರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಸೇವೆಗಳು ಎಂದಿನಂತೆ ಇರಲಿವೆ. ಇದರ ಜೊತೆಗೆ ಅಗತ್ಯ ಸೇವೆ ಇರುವ ಎಲ್ಲಾ ಕೈಗಾರಿಕೆಗಳು, ಕಂಪನಿಗಳು, ಸಂಸ್ಥೆಗಳು ಕಾರ್ಯ ನಿರ್ವಹಿಸಲಿವೆ. ದಿನನಿತ್ಯದ ಕಿರಾಣಿ, ತರಕಾರಿ ವ್ಯಾಪಾರ ಬೆಳಗ್ಗೆ 6ರಿಂದ ಮಧ್ಯಾಹ್ನ 2ಗಂಟೆಗಳವರೆಗೆ ಇರಲಿವೆ ಎಂದು ಡಿಸಿ ತಿಳಿಸಿದ್ದಾರೆ.
ಲಾಕ್ಡೌನ್ ವೇಳೆ ಜಾರಿಯಾಗಿರುವ ಸೇವೆಗಳು ಬೆಳಗ್ಗೆ 6ರಿಂದ ಮಧ್ಯಾಹ್ನ 2ಗಂಟೆಯವರೆಗೆ ಇರಲಿವೆ ಎಂದು ತಿಳಿಸಿದ್ದಾರೆ.