ವಿಜಯಪುರ: ಕಾರ ಹುಣ್ಣಿಮೆ ಕರಿಯಲ್ಲಿ ಎತ್ತು ಗುದ್ದಿ ವ್ಯಕ್ತಿ ಸಾವನ್ನಪ್ಪಿರುವ ಪ್ರಕರಣದ ತನಿಖೆಯನ್ನು ಸೂಕ್ತವಾಗಿ ನಡೆಸುವಂತೆ ಪೊಲೀಸರಿಗೆ ಸೂಚಿಸುವುದಾಗಿ ಗೃಹ ಸಚಿವ ಎಂ. ಬಿ. ಪಾಟೀಲ್ ಹೇಳಿದ್ದಾರೆ.
ಬಲಭೀಮ ಮೈಲಾರಿ ಪೋಳ ಎಂಬ ವ್ಯಕ್ತಿಗೆ ಜೂನ್ 23ರಂದು ಕಾಖಂಡಕಿಯಲ್ಲಿ ನಡೆದಿದ್ದ ಕರಿ ಹರಿಯುವ ಹಬ್ಬದಲ್ಲಿ ಪಾಲ್ಗೊಂಡಿದ್ದಾಗ ಎತ್ತು ಗುದ್ದಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಆತ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಾವನ್ನಪ್ಪಿದ್ದಾನೆ. ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಎಂ.ಬಿ ಪಾಟೀಲರು, ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ವ್ಯಕ್ತಿಯ ಸಾವಿಗೆ ಕಾರಣವನ್ನು ಪತ್ತೆ ಮಾಡಲು ಸೂಚಿಸುತ್ತೇನೆ ಎಂದರು.
ಇನ್ನು ಕಾರ ಹುಣ್ಣಿಮೆ ಕರಿ ಆಚರಣೆಯಂತಹ ಕಾರ್ಯಕ್ರಮಗಳನ್ನು ನಿಷೇಧಿಸಲು ಸಾಧ್ಯವಿಲ್ಲ. ಇಂತಹ ಕಾರ್ಯಕ್ರಮಗಳ ಆಚರಣೆ ಸಂದರ್ಭದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಕುರಿತು ಪೊಲೀಸರಿಗೆ ನಿರ್ದೇಶನ ನೀಡಲಾಗುವುದು ಎಂದರು.
ಐಎಂಎಂ ವಂಚನೆ ಪ್ರಕರಣದ ತನಿಖೆ ಚುರುಕು :
ಇದೇ ಸಂದರ್ಭದಲ್ಲಿ ಐಎಂಎ ಬಹುಕೋಟಿ ವಂಚನೆ ಪ್ರಕರಣದ ಬಗ್ಗೆ ಮಾತನಾಡಿದ ಸಚಿವರು, ಈಗಾಗಲೇ ಈ ಕುರಿತು ಐಎಸ್ಟಿ ತನಿಖೆ ಚುರುಕಿನಿಂದ ಸಾಗಿದೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಗ್ಗೆ ಜನಕ್ಕೂ ಗೊತ್ತಿದೆ. ನಾನೂ ಕೂಡ ಎರಡು ದಿನಗಳ ಹಿಂದೆ ಪರಿಶೀಲನೆ ಮಾಡಿದ್ದೇನೆ. ಈ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಆರೋಪಿಯ ಬಂಧನಕ್ಕೆ ಲುಕ್‌ಔಟ್ ನೊಟೀಸ್ ಜಾರಿ ಮಾಡಲಾಗಿದೆ ಎಂದು ಸಚಿವ ಪಾಟೀಲ್ ಮಾಹಿತಿ ನೀಡಿದರು.
ಇನ್ನು ಈ ಪ್ರಕರಣವನ್ನು ಗೃಹ ಸಚಿವನಾಗಿ ನಾನು ಮತ್ತು ಗೃಹ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದ್ದು, ವ್ಯವಸ್ಥಿತವಾಗಿ, ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದೇನೆ. ಈಗಾಗಲೇ ತನಿಖೆಯ ಮಹತ್ವದ ಮಾಹಿತಿಯನ್ನು ಸಹ ಸಿಎಂ ಗಮನಕ್ಕೂ ತರಲಾಗಿದೆ ಎಂದು ಎಂ ಬಿ ಪಾಟೀಲ್ ಇದೇ ವೇಳೆ ಹೇಳಿದರು.