ವಿಜಯಪುರ: ಸಿಎಂ ಬಿಎಸ್ ಯಡಿಯೂರಪ್ಪ ಅವರ ಅಧಿಕಾರಾವಧಿ ಮುಗಿದ ಮೇಲೆ ನಾವು ಪಂಚಮಸಾಲಿ ಸಮುದಾಯಕ್ಕೆ ಸಿಎಂ ಸ್ಥಾನ ಕೇಳುತ್ತೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧಿಪತಿ ಬಸವ ಜಯಮೃತ್ಯುಂಜಯ ಶ್ರೀ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತಾನಡಿದ ಅವರು, ಸಚಿವ ಸಂಪುಟದಲ್ಲಿ ನಮ್ಮ ಸಮುದಾಯದವರಿಗೆ ಹೆಚ್ಚಿನ ಸಚಿವ ಸ್ಥಾನ ನೀಡದಿರೋದಕ್ಕೆ ನಮಗೂ ನೋವಿದೆ. ಸಚಿವ ಸ್ಥಾನದ ಬೇಡಿಕೆ ಇಟ್ಟು ಸಾಕಾಗಿದೆ, ನಮಗೂ ಸ್ವಾಭಿಮಾನವಿದೆ. ಪಂಚಮಸಾಲಿ ಸಮುದಾಯದ ನಾಯಕರಿಗೆ ಸಚಿವ ಸ್ಥಾನ ನೀಡುವುದು ಬಿಡುವುದು ಹೈಕಮಾಂಡ್ಗೆ ಬಿಟ್ಟ ವಿಚಾರ. ಆದ್ರೆ ಪಂಚಮಸಾಲಿಗೆ ಸರ್ಕಾರ 2 ಎ ಮೀಸಲಾತಿ ನೀಡಲು ಮುಂದಾಗಬೇಕು ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಜಯಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ಹೊರ ಹಾಕಿದ್ರು.
ಇನ್ನು ಉತ್ತರ ಪ್ರದೇಶ ಯುವತಿ ಮೇಲೆ ಅತ್ಯಾಚಾರ ಪ್ರಕರಣ ಕುರಿತು ಮಾತಾನಾಡಿದ ಶ್ರೀಗಳು, ಭಾರತದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವಿದೆ. ಭಾರತ ಮಾತೆಯನ್ನು ತಾಯಿಯೆಂದು ಪೂಜಿಸುವ ನೆಲದಲ್ಲಿ ಅತ್ಯಾಚಾರದಂತಹ ಹೀನ ಕೃತ್ಯ ನಡೆಸುವ ಕಾಮುಕರಿಗೆ ಕೇಂದ್ರ ಸರ್ಕಾರ ಗಲ್ಲು ಶಿಕ್ಷೆ ವಿಧಿಸಬೇಕು. ಜೊತೆಗೆ ಕೃತ್ಯದಲ್ಲಿ ಭಾಗಿಯಾದವರನ್ನು ಸಾರ್ವಜನಿಕ ಸ್ಥಳದಲ್ಲಿ ಗುಂಡಿಕ್ಕಿ ಕೊಲ್ಲುವಂತಹ ಕಾನೂನು ಜಾರಿ ಮಾಡಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅತ್ಯಾಚಾರ ತಡೆಗೆ ವಿಶೇಷ ಕಾನೂನು ರೂಪಿಸುವಂತೆ ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಆಗ್ರಹಿಸಿದರು..