ಮುದ್ದೇಬಿಹಾಳ : ಕೂಲಿ ಅರಸಿಕೊಂಡು ಗೋವಾ ರಾಜ್ಯಕ್ಕೆ ಹೋಗಿರುವ ಅಂದಾಜು ನಾಲ್ಕು ಸಾವಿರ ಜನರು ತಮ್ಮ ಮನೆಗೆ ವಾಪಸ್ ಬರಲು ತಯಾರಾಗಿದ್ದಾರೆ. ಅವರೆಲ್ಲರನ್ನೂ ತಮ್ಮ ತಮ್ಮ ಗ್ರಾಮಕ್ಕೆ ಕರೆತರಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ತಿಳಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ, ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹಾಗೂ ಗೋವಾ ರಾಜ್ಯದ ಕಾರ್ಮಿಕ ಸಚಿವ ರಾಜು ಅವರೊಂದಿಗೆ ಮಾತನಾಡಿದ್ದೇವೆ. ಅಲ್ಲಿನ ಸರ್ಕಾರ ಗಡಿಯವರೆಗೆ ನಮ್ಮ ರಾಜ್ಯದ ಕಾರ್ಮಿಕರನ್ನು ಕಳುಹಿಸಲು ಒಪ್ಪಿದ್ದಾರೆ. ಅಲ್ಲಿಂದ ನಮ್ಮ ಸಾರಿಗೆಯ ಬಸ್‌ಗಳಲ್ಲಿ ಉಚಿತವಾಗಿ ಊರಿಗೆ ಕರೆದೊಯ್ಯಲು ಕ್ರಮ ಜರುಗಿಸಲಾಗುತ್ತದೆ ಎಂದರು.
ಸೇವಾ ಸಿಂಧು ಆ್ಯಪ್ ಕಡ್ಡಾಯವಲ್ಲ:
ನನ್ನ ಪ್ರಕಾರ, ಕೂಲಿ ಕಾರ್ಮಿಕರಿಗೆ ಓದು ಬರಹ ಗೊತ್ತಿಲ್ಲ. ಸೇವಾ ಸಿಂಧು, ಕಂಪ್ಯೂಟರ್ ಜ್ಞಾನ ಅವರಿಗೆ ತಿಳಿದಿಲ್ಲ. ಅಂತವರಿಗೆ ಅರ್ಜಿ ಹಾಕಿಕೊಂಡು ಊರಿಗೆ ಬನ್ನಿ ಎಂದರೆ ಕಷ್ಟವಾಗುತ್ತದೆ. ಹಾಗಾಗಿ, ಆಯಾ ಹತ್ತಿರದ ಗ್ರಾ.ಪಂ.ಗೆ ತೆರಳಿ ದಾಖಲೆಗಳನ್ನು ನೀಡಿದರೆ ಅವರಿಗೆ ತಮ್ಮ ರಾಜ್ಯಕ್ಕೆ ಬರಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.
ಮಹಾರಾಷ್ಟ್ರದ ಕಾರ್ಮಿಕರಿಗಿಲ್ಲ ಅನುಮತಿ:
ಸೋಂಕಿನ ತೀವ್ರತೆ ಹೆಚ್ಚಿರುವ ಮಹಾರಾಷ್ಟ್ರದಲ್ಲಿ ಕೂಲಿ ಕಾರ್ಮಿಕರಿಗೆ ತಮ್ಮ ರಾಜ್ಯಕ್ಕೆ ತೆರಳಲು ಅಲ್ಲಿನ ಸರ್ಕಾರ ಅನುಮತಿ ನೀಡಿಲ್ಲ. ಎಂದರು.