ಮುದ್ದೇಬಿಹಾಳ: ವಿಶ್ವದಲ್ಲಿನ ಮೊದಲ ಎಂಜಿನಿಯರರು ಎಂದರೆ ವಿಶ್ವಕರ್ಮ ಸಮಾಜದವರು. ವಿಶ್ವಕರ್ಮ ಸಮಾಜದವರು ತಮ್ಮ ಮೂಲ ಕಸುಬಿನಲ್ಲಿ ನವೀನ ತಂತ್ರಾಜ್ಞಾನದ ಕೌಶಲ್ಯಗಳನ್ನು ಅಳವಡಿಸಿಕೊಳ್ಳದೇ ಇರುವುದೇ ಆರ್ಥಿಕವಾಗಿ ಹಿಂದುಳಿಯಲು ಕಾರಣ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ಮಾರುತಿ ನಗರದಲ್ಲಿನ ಮೌನೇಶ್ವರ ದೇವಸ್ಥಾನದಲ್ಲಿ ತಾಲೂಕಾಡಳಿತ ಹಾಗೂ ವಿಶ್ವಕರ್ಮ ಸಮಾಜದಿಂದ ಹಮ್ಮಿಕೊಂಡಿದ್ದ ತಾಲೂಕಾಮಟ್ಟದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವಕರ್ಮ ಸಮಾಜದವರು ತಮ್ಮ ಮೂಲ ಕಸುಬಿನಲ್ಲಿ ನವೀನ ತಂತ್ರಾಜ್ಞಾನದ ಕೌಶಲ್ಯಗಳನ್ನು ಅಳವಡಿಸಿಕೊಳ್ಳದೇ ಇರುವುದು ಆರ್ಥಿಕವಾಗಿ ಹಿಂದುಳಿಯಲು ಕಾರಣವಾಗಿದ್ದು, ವೃತ್ತಿಯಲ್ಲಿ ಆಧುನಿಕ ತಂತ್ರಜ್ಞಾನದ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ನಿರ್ಗತಿಕರು, ಅಶಕ್ತರು, ತುಳಿತಕ್ಕೊಳಗಾದವರಿಗೆ ಸರ್ಕಾರದಿಂದ ಸೌಲಭ್ಯಗಳನ್ನು ನೀಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಸರಕಾರದಲ್ಲಿ ಹೆಚ್ಚಿನ ಸಬ್ಸಿಡಿ ಕೊಡಲಾಗಿದೆ. ಮಹಿಳೆಯರಿಗೆ ಶೇ.50 ರಷ್ಟು ಸಬ್ಸಿಡಿ ನೀಡಲಾಗಿದೆ. ವಿಶ್ವಕರ್ಮ ನಿಗಮಕ್ಕೆ ಪಿಎಂ ಹಾಗೂ ಸಿಎಂ ಅವರು 24 ಕೋಟಿ.ರೂ.ಗಳನ್ನು ನೀಡಿದ್ದಾರೆ ಎಂದರು.
ಇದೇ ವೇಳೆ ಸಮಾಜದ ಮುಖಂಡ ನಾರಾಯಣ ಮಾಯಾಚಾರಿ ಮಾತನಾಡಿ, ವಿಶ್ವಕರ್ಮ ಸಮಾಜಕ್ಕೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ. ಪೊಲೀಸರಿಂದ ಬಂಗಾರದ ಅಂಗಡಿಕಾರರಿಗೆ ಕಳ್ಳತನದ ಪ್ರಕರಣಗಳ ಮೇಲೆ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ.ಇದು ನಿಲ್ಲಬೇಕು ಎಂದರು.
ಈ ಸಂದರ್ಭದಲ್ಲಿ 2020ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಸೌಮ್ಯಾ ಬಡಿಗೇರ, ಲಕ್ಷ್ಮೀಕಾಂತ ಪತ್ತಾರ,ಗೌರಿ ಬಡಿಗೇರ,ಕಾಳಪ್ಪ ಬಡಿಗೇರ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ನಾಲತವಾಡ ಬ್ರಹ್ಮಾಂಡಭೇರಿನ ಮಠದ ಗಂಗಾಧರ ಶ್ರೀಗಳು, ಪ್ರಥಮ ದರ್ಜೆ ಗುತ್ತಿಗೆದಾರ ಎಂ.ಎನ್.ಮದರಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕಾಶೀಬಾಯಿ ರಾಂಪೂರ,ಪುರಸಭೆ ಕಂದಾಯಾಧಿಕಾರಿ ಎಂ.ಬಿ.ಮಾಡಗಿ ಇತರರು ಇದ್ದರು.