ಮುದ್ದೇಬಿಹಾಳ: ನಾವು ಬಡವರಿದ್ದೇವೆ. ನಮಗೆ ಹಣ ಕೊಟ್ಟು ಆಯ್ಕೆಯಾಗುವ ಶಕ್ತಿ ಇಲ್ಲ. ಊರಿನ ಜನರೇ ಮುಂದೆ ನಿಂತು ನಾಮಪತ್ರ ಕೊಡಿಸಿ ಅವಿರೋಧ ಆಯ್ಕೆಗೆ ಸಹಕರಿಸಿದ್ದಾರೆ. ನಾವು ಊರಿನ ಅಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತೇವೆ ಎಂದು ತಾಲೂಕಿನ ನಾಗಬೇನಾಳ ಗ್ರಾ.ಪಂ ವ್ಯಾಪ್ತಿಯ ಸಿದ್ಧಾಪೂರದಿಂದ ಅವಿರೋಧ ಆಯ್ಕೆಯಾಗಿರುವ ಮೂವರು ಸದಸ್ಯರು ಉಪ ವಿಭಾಗಾಧಿಕಾರಿಗಳ ನೇತೃತ್ವದ ಅಧಿಕಾರಿಗಳ ತಂಡಕ್ಕೆ ಹೇಳಿಕೆ ನೀಡಿದ್ದಾರೆ.
ಓದಿ: ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೃತ್ಯ: ರಾಯಚೂರಿನ ಗ್ರಾ.ಪಂನಲ್ಲಿ ಸದಸ್ಯ ಸ್ಥಾನಗಳ ಹರಾಜು!
ಎಸ್‌ಸಿ ಮಹಿಳೆ ಮೀಸಲಾತಿಯಡಿ ಆಯ್ಕೆಯಾಗಿರುವ ಬಸಮ್ಮ ಗೌಂಡಿ ಮಾತನಾಡಿ, ಹಿಂದುಳಿದ ವರ್ಗದ ಮೀಸಲಾತಿ ಅಡಿ ಆಯ್ಕೆಯಾದ ಯಮನವ್ವ ಸಂ.ಹುಂಡಿ, ಸಾಮಾನ್ಯ ವರ್ಗದಿಂದ ಆಯ್ಕೆಯಾಗಿರುವ ಬಸವರಾಜ ಜಂಬಣ್ಣ ಕುಸಬಿ ಹಾಗು ನಾನು ಊರಿನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಲಕ್ಷ ಲಕ್ಷ ರೂಪಾಯಿ ಕೊಟ್ಟು ಪಂಚಾಯಿತಿಗೆ ಆಯ್ಕೆಯಾಗುವಂತಹ ಸಾಮರ್ಥ್ಯ ನಮ್ಮಲ್ಲಿಲ್ಲ. ಗ್ರಾಮಸ್ಥರೇ ಮುಂದೆ ನಿಂತು ಅವಿರೋಧ ಆಯ್ಕೆ ಮಾಡಿಸಿದ್ದಾರೆ. ಅದು ಬಿಟ್ಟು ಬೇರೇನೂ ನಡೆದಿಲ್ಲ ಎಂದು ಹೇಳಿದರು.
ಗ್ರಾಮಸ್ಥರಾದ ಸಂಗಣ್ಣ ಡಂಬಳ, ಎಸ್.ಎಸ್.ಹವಾಲ್ದಾರ್, ಶಿವರುದ್ರಯ್ಯ ಹಿರೇಮಠ, ತಿಪ್ಪಣ್ಣ ವಾಲೀಕಾರ,ಶಿವಾನಂದ ಉಂಡಿ,ಮಲ್ಲಪ್ಪ ಹುನಕುಂಟಿ ಮೊದಲಾದವರು ಮಾತನಾಡಿ, ನಾಗಬೇನಾಳ ಗ್ರಾ.ಪಂ ವ್ಯಾಪ್ತಿಯಲ್ಲಿ 30-40 ವರ್ಷಗಳಿಂದ ಅವಿರೋಧ ಆಯ್ಕೆ ಮಾಡಿಕೊಂಡು ಬರುತ್ತಿದ್ದೇವೆ. ಸದ್ಯಕ್ಕೆ ಅವಿರೋಧ ಆಯ್ಕೆಯಾಗಿರುವವರ ವಿರುದ್ಧ ನಾಮಪತ್ರ ಸಲ್ಲಿಸುವುದಕ್ಕೆ ಯಾರಿಗೂ ತಡೆದಿಲ್ಲ. ಊರಿನ ಅಭಿವೃದ್ಧಿಗಾಗಿ ನಿಷ್ಪಕ್ಷಪಾತವಾಗಿ ಆಮಿಷಗೊಳಗಾಗದೇ ಅವಿರೋಧ ಆಯ್ಕೆ ಮಾಡಿದ್ದೇವೆ. ಇದಕ್ಕೆ ತಪ್ಪು ಕಲ್ಪನೆ ಮೂಡಿಸುವುದು ಬೇಡ ಎಂದರು.
ಚುನಾವಣೆ ಮಾದರಿ ನೀತಿ ಸಂಹಿತೆ ಪಾಲನೆ ನೋಡಲ್ ಅಧಿಕಾರಿ ಡಾ. ಎನ್.ಬಿ. ಹೊಸಮನಿ, ಚುನಾವಣಾಧಿಕಾರಿ ಐ.ಬಿ.ಹಿರೇಮಠ, ಸಿಪಿಐ ಆನಂದ ವಾಘ್ಮೋಡೆ, ಪಿಎಸ್‌ಐ ಮಲ್ಲಪ್ಪ ಮಡ್ಡಿ, ಕಂದಾಯ ನಿರೀಕ್ಷಕ ಎನ್.ಬಿ.ದೊರೆ ಮೊದಲಾದವರು ಇದ್ದರು.