ವಿಜಯಪುರ: ಜಿಲ್ಲೆಯ ಐತಿಹಾಸಿಕ ಉಪ್ಪಲಿಬುರ್ಜ್ ಮೇಲಿಂದ ಜಿಗಿದು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರ ನಗರದ ಉಪ್ಪಲಿಬುರ್ಜ್‌ನಲ್ಲಿ ನಡೆದಿದೆ. ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಚಂದಾಬಾವಡಿ ನಿವಾಸಿ ಖಾಜಾ ಅಮೀನ್ ನದಾಫ್ (30) ಆತ್ಮಹತ್ಯೆ ಶರಣಾದ ವ್ಯಕ್ತಿ. ಘಟನಾಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆತ್ಮಹತ್ಯೆಗೆ ನಿಖರವಾದ ಮಾಹಿತಿ ಇನ್ನು ತಿಳಿದು ಬಂದಿಲ್ಲ.
ರೈಲಿನ ಚಕ್ರದಲ್ಲಿ ಹೊಗೆ ಆತಂಕಗೊಂಡ ಪ್ರಯಾಣಿಕರು: ಚಲಿಸುತ್ತಿದ್ದ ರೈಲಿನ ಚಕ್ರದಲ್ಲಿ ಹೊಗೆ ಕಾಣಿಸಿಕೊಂಡು ಮಾರ್ಗಮಧ್ಯೆ ಸಂಚಾರ ಸ್ಥಗಿತಗೊಂಡ ಘಟನೆ ನಡೆದಿದೆ. ಸೋಲಾಪುರ-ಗದಗ ಡೆಮೊ (ಪ್ರಾಯೋಗಿಕ ರೈಲು) ಎಕ್ಸಪ್ರೆಸ್ ರೈಲು ಮಿಂಚನಾಳ - ಅಲಿಯಾಬಾದ್ ಮಧ್ಯೆ ಚಲಿಸುತ್ತಿರುವಾಗ ರೈಲಿನ ಚಕ್ರದಲ್ಲಿ ಹೊಗೆ ಕಾಣಿಸಿಕೊಂಡಿದೆ. ಹೊಗೆಯನ್ನು ಕಂಡು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಕೆಲ ಕ್ಷಣ ಆತಂಕಗೊಂಡಿದ್ದರು. ನಂತರ ರೈಲಿನ ಚಕ್ರಗಳನ್ನು ಗಾರ್ಡ್ಗಳು ತಪಾಸಣೆ ನಡೆಸಿದ ಬಳಿಕ ಯಥಾವತ್ತಾಗಿ ರೈಲು ಚಲಿಸಿದೆ.
ಸರಣಿ ಅಪಘಾತ : ಬಿಜೆಪಿಯ ಸ್ವಾಭಿಮಾನ ಯಾತ್ರೆಗೆ ಆಗಮಿಸಿದ್ದ ಕಾರ್ಯಕರ್ತರ ಕಾರು ಸರಣಿ ಅಪಘಾತ ಸಂಭವಿಸಿದ ಘಟನೆ ನಿಡಗುಂದಿ ತಾಲೂಕಿನ ಆಲಮಟ್ಟಿ ಉದ್ಯಾನವನ ರಸ್ತೆಯಲ್ಲಿ ನಡೆದಿದೆ. ಬಿಜೆಪಿ ಮುಖಂಡ ಅಪ್ಪುಗೌಡ ಮನಗೂಳಿ, ರಾಜು ನ್ಯಾಮಗೌಡ ಸೇರಿದಂತೆ ಐದು ಕಾರುಗಳು ಅಪಘಾತದಲ್ಲಿ ತುತ್ತಾಗಿದೆ.
ಐದು ಕಾರುಗಳು ಸಂಪೂರ್ಣವಾಗಿ ಜಖಂಗೊಂಡಿದ್ದು, ಯಾವುದೇ ಪ್ರಾಣಹಾನಿ ಉಂಟಾಗಿಲ್ಲ ಎಂದು ವರದಿಯಾಗಿದೆ. ನಂತರ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದರು.
ಆಲಮಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಒಂದು ಕೋಟಿ ಮೌಲ್ಯದ ಚಿನ್ನದ ಗಟ್ಟಿ ಎಗರಿಸಿದ ಖದೀಮರು: ಪೊಲೀಸರ ಸೋಗಿನಲ್ಲಿ ಬಂದು ಬೆದರಿಸಿದ ದುಷ್ಕರ್ಮಿಗಳು 1 ಕೋಟಿ 12 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿ ಕಸಿದುಕೊಂಡು ಪರಾರಿಯಾಗಿರುವ ಘಟನೆ ಮೂರು ದಿನಗಳ ಹಿಂದೆ ನಗರದ ಮೆಜೆಸ್ಟಿಕ್ ಸಮೀಪದ ಆನಂದ ರಾವ್ ಸರ್ಕಲ್ ಬಳಿ ನಡೆದಿದೆ. ರಾಯಚೂರಿನಿಂದ ಚಿನ್ನ ಖರೀದಿಗೆ ಬಂದಿದ್ದ ಅಬ್ದುಲ್ ರಜಾಕ್ ಮತ್ತು ಮಲ್ಲಯ್ಯ ಎಂಬವರನ್ನು ಪೊಲೀಸರೆಂದು ಪರಿಚಯಿಸಿಕೊಂಡ ಇಬ್ಬರು ಅಪರಿಚಿತರು ಚಿನ್ನದ ಗಟ್ಟಿ ಪಡೆದುಕೊಂಡು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಬರುವಂತೆ ತಿಳಿಸಿ ಸ್ಥಳದಿಂದ ಪರಾರಿಯಾಗಿದ್ದರು.
ರಾಯಚೂರಿನ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಬ್ದುಲ್ ರಜಾಕ್ ಹಾಗೂ ಮಲ್ಲಯ್ಯ, ಅಂಗಡಿ ಮಾಲೀಕರ ಸೂಚನೆಯಂತೆ ಬೆಂಗಳೂರಿಗೆ ಬಂದು ಚಿನ್ನ ಖರೀದಿಸಿದ್ದರು. ವಾಪಸ್ ರಾಯಚೂರಿಗೆ ತೆರಳಲು ಬಸ್ ನಿಲ್ದಾಣದ ಬಳಿ ಕಾಯುತ್ತಿದ್ದಾಗ ಅಲ್ಲಿಗೆ ಬಂದ ಆರೋಪಿಗಳು ಕೃತ್ಯ ಎಸಗಿದ್ದಾರೆ. ಅಸಲಿ ಪೊಲೀಸರೇ ಇರಬಹುದು ಎಂದು ನಂಬಿದ ಇಬ್ಬರು ಠಾಣೆ ಬಳಿ ಬಂದು ವಿಚಾರಿಸಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಪೀಠೋಪಕರಣ ಗೋದಾಮಿನಲ್ಲಿ ಭಾರಿ ಬೆಂಕಿ ಅವಘಡ: ತೀವ್ರಗತಿಯಲ್ಲಿ ಬೆಂಕಿ ನಂದಿಸುವ ಕಾರ್ಯ