ವಿಜಯಪುರ: ನಮ್ಮ ಸಮಸ್ಯೆ ಬಗೆಹರಿಸಾಕ್ ಆಗತೈತಿಲ್ಲರೀ.. ಇಲ್ಲಾದರ್ ಹೊಳೆಗ್ಯಾ ಹಾರ್ತಿನ್ರೀ.. ಬಹಳಾ ಮಾತಾಡಾದ್ರ... ಹುಚ್ಚ ಅಂತೀರಿ, ನನಗೆ ಹುಚ್ಚ ಎಂದ್ರೂ ಚಿಂತಿ ಇಲ್ಲ.. ನಾನ್ ಮಾತನಾಡ್ತೀನಿ.. ಕಾಲ್ ಮುಗಿತಿನ್ರೀ.. ನಮಗ್ ಮನೆ ಸ್ಥಳಾಂತರ ಮಾಡ್ರೀ... ಇದು ಸಂತ್ರಸ್ತನ ನೋವಿನ ಆಕ್ರೋಶದ ನುಡಿ.
ಸಚಿವರಿಗೆ ಕಾಲು ಮುಗಿತೀನ್ರಿ ಎಂದು ಸಚಿವರು, ಜನಪ್ರತಿನಿಧಿ, ಅಧಿಕಾರಿಗಳು ಕುಳಿತ ಟೇಬಲ್ಗೆ ಹಣೆ ಹಚ್ಚಿ ಕೈ ಮುಗಿದ ಘಟನೆ ಮುಳುಗಡೆಯಿಂದ ಬಾಧಿತವಾದ ತಾರಾಪುರದಲ್ಲಿ ನಡೆಯಿತು. ಭೀಮಾ ನದಿ ಪ್ರವಾಹದಿಂದ ಜಲಾವೃತವಾಗಿರುವ ಆಲಮೇಲ ತಾಲೂಕಿನ ತಾರಾಪುರ ಗ್ರಾಮದ ಸಮೀಪದ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಿರುವ ಪರಿಹಾರ ಕೇಂದ್ರಕ್ಕೆ ಅಧಿಕಾರಿಗಳ ತಂಡದೊಂದಿಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸಂತ್ರಸ್ತರ ಸಮಸ್ಯೆ ಆಲಿಸಲು ಸಭೆ ನಡೆಸಿದರು. ಸಭೆಯಲ್ಲಿ ಪ್ರವಾಹ ಬಾಧಿತ ಗ್ರಾಮದ ಸಂತ್ರಸ್ತ ರೈತ ಭೀಮಪ್ಪ ವಡ್ಡರ ಅವರ ಆಕ್ರೋಶ ಹಾಗೂ ಹತಾಶೆಯ ಮಾತುಗಳು ಸಚಿವರಾದಿಯಾಗಿ, ಅಧಿಕಾರಿಗಳಲ್ಲಿಯೇ ಮರುಕ ಹುಟ್ಟಿಸುವಂತಿತ್ತು.
ಸಚಿವರು ತಮ್ಮ ಸಮಸ್ಯೆ ಆಲಿಸಲು ಬರುತ್ತಾರೆ ಎಂದು ಬಹಳ ಹೊತ್ತು ಕಾದು ಕುಳಿತಿದ್ದ ಸಂತ್ರಸ್ತರಿಗೆ ಮೊದಲು ಅಧಿಕಾರಿಗಳ ಹಿತವಚನ, ನಂತರ ಸಚಿವರ ಭಾಷಣದಿಂದ ರೋಷಿ ಹೋಗಿದ್ದರು. ಈ ವೇಳೆ ಮನವಿ ಸಲ್ಲಿಸಲು ಸಂತ್ರಸ್ತರಿಗೆ ಅವಕಾಶ ನೀಡಿದಾಗ ಸಂತ್ರಸ್ತ ಭೀಮಪ್ಪ ವಡ್ಡರ ಮಾತನಾಡಿ, ಕಲಬುರಗಿ ಜಿಲ್ಲೆಯ ಸೊನ್ನ ಬ್ಯಾರೇಜ್ ಹಿನ್ನೀರಿನಿಂದ ಆಗುತ್ತಿರುವ ಸಮಸ್ಯೆ ಹೇಳಿಕೊಂಡರು. ಈ ಬಾರಿ ಪ್ರವಾಹ ಬಂದಾಗ ಅಧಿಕಾರಿಗಳು ತಮಗೆ ಮನೆಯ ವಸ್ತುಗಳನ್ನು ತೆಗೆದುಕೊಳ್ಳದಂತೆ ಕೈ ಮುಗಿದುಕೊಂಡು ಪರಿಹಾರ ಕೇಂದ್ರಕ್ಕೆ ತಂದಿದ್ದಾರೆ. ಈಗ ನಾವು ಕೈ ಮುಗಿಯುತ್ತೇವೆ. ನಮ್ಮನ್ನು ಗೌರವಯುತವಾಗಿ ಸ್ಥಳಾಂತರ ಮಾಡಿ ಎಂದು ಟೇಬಲ್ಗೆ ಹಣೆ ಹಚ್ಚಿ ನಮಸ್ಕರಿಸಿದನು. ಇನ್ನೊಬ್ಬ ಸಂತ್ರಸ್ತ ಸಹ ನಮಗೆ ನ್ಯಾಯಯುತವಾಗಿ ಮನೆ ಕೊಡಿ, ಇನ್ನೂ ಹೆಚ್ಚು ಜಾಗ ಖರೀದಿಸಿ ಎಲ್ಲರಿಗೂ ಬದುಕುವಂತೆ ದಯೆ ತೋರಿ ಎಂದು ಬೇಡಿಕೊಂಡನು.
ಸಂತ್ರಸ್ತರ ಸಮಸ್ಯೆ ಆಲಿಸಿದ ಸಚಿವೆ ಶಶಿಕಲಾ ಜೊಲ್ಲೆ, ನಾನು ನಿಮ್ಮ ಮಗಳೆಂದು ಭಾವಿಸಿ. ಯಾರಿಗೂ ಅನ್ಯಾಯವಾಗದಂತೆ, ಸರ್ಕಾರದ ನಿಯಮಾನುಸಾರ ಎಲ್ಲರಿಗೂ ಮನೆ ನಿರ್ಮಿಸಿಕೊಡಿಸುವೆ. ತಾರಾಪುರ ಗ್ರಾಮದ 15 ವರ್ಷದ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡುತ್ತೇನೆ. ಅಗತ್ಯ ಬಿದ್ದರೆ ಸಿಎಂ ಜತೆ ಚರ್ಚೆ ನಡೆಸಿ ಶೀಘ್ರ ಸಮಸ್ಯೆ ಬಗೆಹರಿಸುವೆ ಎಂದು ಭರವಸೆ ನೀಡಿದರು.
ತಾರಾಪುರ ಗ್ರಾಮ ಸ್ಥಳಾಂತರ ಈಗಾಗಲೇ ಮಾಡಿಯಾಗಿದೆ. ಆದರೆ ನಿವೇಶನ ಹಂಚಿಕೆ ವಿಚಾರದಲ್ಲಿ ತಾರತಮ್ಯವಾಗಿದೆ ಎಂದು ಇಲ್ಲಿಯವರೆಗೆ ಯಾರೂ ಗ್ರಾಮ ತೊರೆದಿಲ್ಲ. 198 ಮನೆಗಳ ಹಕ್ಕುಪತ್ರ ಹಂಚಿಕೆಯಾಗಿದೆ. 12 ಮನೆಗಳ ಸಮಸ್ಯೆ ಇರುವ ಕಾರಣ ಅದು ನನೆಗುದಿಗೆ ಬಿದ್ದಿದೆ. ವಾಣಿಜ್ಯ ಬಳಕೆಗೆ ಕಾಯ್ದಿರಿಸಿರುವ 51 ಸೈಟ್ ಖರೀದಿಗೆ 170 ಅರ್ಜಿಗಳು ಬಂದಿರುವ ಕಾರಣ ತಾರಾಪುರ ಸ್ಥಳಾಂತರ ಕಗ್ಗಂಟಾಗಿಯೇ ಉಳಿದಿದೆ.