ವಿಜಯಪುರ: ಕೊರೊನಾದಿಂದ ಆಗುತ್ತಿರುವ ಸಾವಿನ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ವೈದ್ಯಾಧಿಕಾರಿಗಳ ಜತೆ ಸಭೆ ನಡೆಸಿದರು.
ನಗರದ ಬಿಎಲ್ಡಿಇ ವಿಶ್ವ ವಿದ್ಯಾಲಯ, ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ಶಿಕ್ಷಣ ವಿಭಾಗದ ವೈದ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲೆಯಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಹೆಚ್ಚಿದೆ. ಆದ್ರೂ ಸಾವಿನ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ತಜ್ಞವೈದ್ಯರು ವಿಶೇಷ ಗಮನ ಹರಿಸುವಂತೆ ಡಿಸಿ ಸೂಚಿಸಿದರು. ಜಿಲ್ಲೆಯಲ್ಲಿ ಕೋವಿಡ್ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳ ಚಿಕಿತ್ಸೆ ಸೇರಿದಂತೆ ಇನ್ನಿತರ ಪರಿಶೀಲನೆಗೆ ತಜ್ಞರ ಸಮಿತಿ ಹಾಗೂ ಉಪ ಸಮಿತಿ ರಚಿಸಲಾಗಿದ್ದು, ಜಿಲ್ಲೆಯ ಪ್ರತಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಬೇಕು. ಕೊರೊನಾದಿಂದಾಗುತ್ತಿರುವ ಸಾವುಗಳ ಕುರಿತು ಅಂಕಿ, ಅಂಶ ಸಂಗ್ರಹಿಸಬೇಕು ಎಂದರು.
ನೆಗಡಿ, ಕೆಮ್ಮು, ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರು ನಿರ್ಲಕ್ಷ್ಯ ತೋರದೆ ತಮ್ಮ ಕುಟುಂಬಸ್ಥರ ಹಿತ ದೃಷ್ಠಿಯಿಂದ ಚಿಕಿತ್ಸೆಗೆ ಒಳಪಡಬೇಕು. ದೈಹಿಕವಾಗಿ ಎಷ್ಟೇ ಸದೃಢವಾಗಿದ್ದರೂ ಇಂಥ ಲಕ್ಷಣಗಳಿದ್ದಲ್ಲಿ ತಕ್ಷಣ ತಜ್ಞ ವೈದ್ಯರನ್ನ ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ವಿದ್ಯಾರ್ಹತೆ ಇಲ್ಲದ ಮತ್ತು ಸ್ಥಳೀಯ ವೈದ್ಯರ ಬಳಿ ಹೋಗದೆ ನುರಿತ ತಜ್ಞ ವೈದ್ಯರ ಬಳಿಯೇ ಚಿಕಿತ್ಸೆ ಪಡೆಯುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಸೋಂಕಿತರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಯಾವುದೇ ಲೋಪ ಆಗದಂತೆ ಎಚ್ಚರಿಕೆ ವಹಿಸಿ. ರಿ ಇನ್ಫೆಕ್ಷನ್ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಸೋಂಕಿತ ವ್ಯಕ್ತಿಯ ಕೋವಿಡ್ ವರದಿ ನೆಗೆಟಿವ್ ಬಂದ ಬಳಿಕ ಡಿಸ್ಚಾರ್ಜ್ ಮಾಡಬೇಕು. ಕೊರೊನಾ ವೈರಸ್ನಿಂದ ಮೃತಪಟ್ಟವರ ದಾಖಲಾತಿಗಳನ್ನ ಸಮರ್ಪಕವಾಗಿ ನಿರ್ವಹಿಸುವಂತೆ ವೈದ್ಯರಿಗೆ ಸಲಹೆ ನೀಡಿದರು.