ವಿಜಯಪುರ: ಕೇಂದ್ರ ಲೋಕಸೇವಾ ಆಯೋಗದ-2019 ಸಾಲಿನ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ವಿಜಯಪುರದ ಸವಿತಾ ಗೋಟ್ಯಾಳ 626ನೇ ರ‍್ಯಾಂಕ್ ಪಡೆದಿದ್ದಾರೆ. ಐಎಎಸ್ ಅಧಿಕಾರಿಯಾಗಿ ಜನಸೇವೆ ಮಾಡಬೇಕೆನ್ನುವ ಬಯಕೆ ಇರುವ ಕಾರಣ ಮತ್ತೊಮ್ಮೆ ಪರೀಕ್ಷೆ ಬರೆದು ತಮ್ಮ ರ‍್ಯಾಂಕ್ ಅನ್ನು ಇನ್ನಷ್ಟು ಉತ್ತಮಗೊಳಿಸುವ ಬಯಕೆ ಹೊಂದಿದ್ದಾರೆ.
ವಿಜಯಪುರ ನಗರದ ಸಂಸ್ಕೃತಿ ಕಾಲೋನಿಯ ನಿವಾಸಿ ಬಿಎಸ್ಎನ್ಎಲ್ ನಿವೃತ್ತ ಉದ್ಯೋಗಿ ಸಿದ್ದಪ್ಪ ಗೋಟ್ಯಾಳ ಅವರ ದ್ವಿತೀಯ ಪುತ್ರಿ ಸವಿತಾ ಗೋಟ್ಯಾಳ ಈ ಸಾಧನೆ ಮಾಡಿದ್ದಾರೆ.
ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಸವಿತಾ ಅವರು ತಮ್ಮ ಸಹೋದರಿ ಅಶ್ವಿನಿ ಗೋಟ್ಯಾಳ ಸಾಧನೆಯಿಂದ ಪ್ರೇರಣೆಗೊಂಡು ಸಾಫ್ಟ್‌ವೇರ್ ಉದ್ಯೋಗಕ್ಕೆ ವಿದಾಯ ಹೇಳಿ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಿದ್ದರು. ಇವತ್ತು ತನಗೆ ಸಿಕ್ಕಿರುವ ಪ್ರತಿಫಲದ ಬಗ್ಗೆ ಅವರು ತೃಪ್ತಿ ಪಟ್ಟುಕೊಂಡಿಲ್ಲ. ಐಎಎಸ್ ಅಧಿಕಾರಿಯಾಗಲು ಮತ್ತೊಮ್ಮೆ ಪರೀಕ್ಷೆ ಬರೆಯಲು ಉತ್ಸುಕರಾಗಿದ್ದಾರೆ.
ಸವಿತಾ ಗೋಟ್ಯಾಳ ಹಿರಿಯ ಸಹೋದರಿ ಅಶ್ವಿನಿ ಗೋಟ್ಯಾಳ ಕಳೆದ 2016-17ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ಗಳಿಸಿದ್ದರು. ಸದ್ಯ ಅಶ್ವಿನಿ ಪಂಜಾಬ್ ರಾಜ್ಯದ ಲುಧಿಯಾನಾದಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ರಜೆ ಮೇಲೆ ತವರಿಗೆ ಬಂದಿದ್ದು, ಸಹೋದರಿ ಸವಿತಾ ಸಾಧನೆಯ ಸಂಭ್ರಮದಲ್ಲಿದ್ದಾರೆ.
ಈ ಕುರಿತು 'ಈಟಿವಿ ಭಾರತ' ಜತೆ ಮಾತನಾಡಿದ ಅಶ್ವಿನಿ, ನಾಗರಿಕ ಸಮಾಜದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಶಕ್ತರಾಗಿದ್ದಾರೆ. ಅದಕ್ಕೆ ನಮ್ಮ ಕುಟುಂಬವೇ ಉದಾಹರಣೆ. ತನ್ನ ಸಹೋದರಿ ಸವಿತಾಳ ಪ್ರಾಮಾಣಿಕ ಪ್ರಯತ್ನ, ಪರೀಕ್ಷೆಗಾಗಿ ಆಕೆ ನಡೆಸಿದ ತಯಾರಿಯ ಬಗ್ಗೆ ನನಗೆ ಹೆಮ್ಮೆ ಇತ್ತು. ಆಕೆ ಸಹ ಯುಪಿಎಸ್ಸಿಯಲ್ಲಿ ಉತ್ತಮ ರ್ಯಾಂಕ್ಗಳಿಸುತ್ತಾಳೆ ಎನ್ನುವ ನಂಬಿಕೆ ಇತ್ತು. ಆ ನಂಬಿಕೆ ಹುಸಿಯಾಗಲಿಲ್ಲ ಎಂದು ಸಂತಸ ಹಂಚಿಕೊಂಡರು.