ವಿಜಯಪುರ: ಕಾಲೇಜಿಗೆ ಹೋದ ಅಪ್ರಾಪ್ತೆ ಮರಳಿ ಮನೆಗೆ ಬಾರದ ಹಿನ್ನೆಲೆ ಅಪಹರಣದ ಶಂಕೆ ವ್ಯಕ್ತಪಡಿಸಿರುವ ಪಾಲಕರು ಮಗಳನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಗರದ ಶಾಂತಿ ನಗರದ ನಿವಾಸಿಯೊಬ್ಬರ 17 ವರ್ಷದ ಮಗಳು ಕಾಣೆಯಾಗಿದ್ದಾಳೆ. ಕಾಲೇಜಿನ ಬಸ್ ಚಾಲಕನೇ ಈ ಕೃತ್ಯ ಎಸಗಿರುವ ಶಂಕೆ ಇದೆ. ಈ ಬಗ್ಗೆ ತನಿಖೆ ನಡೆಸಿ ಮಗಳನ್ನು ಹುಡುಕಿಕೊಡುವಂತೆ ಪಾಲಕರು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣದ ವಿವರ: ನಗರದ ಹೊರವಲಯದ ಇಟ್ಟಂಗಿಹಾಳ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ನಿತ್ಯ ಕಾಲೇಜಿಗೆ ಹೋಗಲು ಶಾಲಾ ಬಸ್‌ನಲ್ಲಿ ಸಂಚರಿಸುತ್ತಿದ್ದಳು. ಪ್ರತಿ ದಿನ ಮಧುವನ ಕ್ರಾಸ್ ಹತ್ತಿರ ಬಸ್ ಬರುತ್ತಿದ್ದು, ಅಲ್ಲಿಂದಲೇ ಬಸ್ ಹತ್ತಿ ಕಾಲೇಜಿಗೆ ತೆರಳುವುದು ಮತ್ತು ವಾಪಸ್ ಅದೇ ಸ್ಥಳಕ್ಕೆ ಬಂದಿಳಿಯುತ್ತಿದ್ದಳು.
ಜೂ. 7ರಂದು ಬೆಳಗ್ಗೆ 7.40ರ ಸುಮಾರಿಗೆ ಎಂದಿನಂತೆ ಅಪ್ರಾಪ್ತೆ ತನ್ನ ತಂದೆ ಜತೆ ಬಂದು ಕಾಲೇಜ್ ಬಸ್ ಹತ್ತಿದ್ದಳು. ಆದರೆ ಸಂಜೆ 6.10ರ ಸುಮಾರಿಗೆ ಅದೇ ಮಧುವನ ಕ್ರಾಸ್ ಹತ್ತಿರ ಮಗಳ ಬರುವಿಕೆಗಾಗಿ ತಂದೆ ಕಾದು ನಿಂತಿದ್ದಾರೆ. ಆದರೆ, ಮಗಳು ಬಾರದ ಹಿನ್ನೆಲೆ ಮನೆಗೆ ಹೋಗಿ ವಿಚಾರಿಸಿದ್ದಾರೆ. ಬಳಿಕ ಮನೆಗೂ ಬಂದಿಲ್ಲದ ಕಾರಣ ಶಾಲೆಗೆ ತೆರಳಿ ವಿಚಾರಿಸಿದ್ದಾರೆ. ಆದರೆ ಕಾಲೇಜು ಸಿಬ್ಬಂದಿ ಆಕೆ ತರಗತಿಗೆ ಹಾಜರಾಗಿಲ್ಲ ಎಂದು ತಿಳಿಸಿದ್ದಾರೆ.
ಅದೇ ಚಿಂತೆಯಲ್ಲಿರುವಾಗ ಪರಿಚಯಸ್ಥರು ಕಾಲೇಜು ಬಸ್ ಚಾಲಕನೊಬ್ಬನ ಬೈಕ್ ಮೇಲೆ ನಿಮ್ಮ ಪುತ್ರಿ ಹೋಗುತ್ತಿರುವುದನ್ನು ತಾವು ಗಮನಿಸಿದ್ದಾಗಿ ತಿಳಿಸಿದ್ದಾರೆ. ಆತನ ಭೇಟಿಗೆ ಕಾಲೇಜಿಗೆ ತೆರಳಿ ವಿಚಾರಿಸಿದರೆ ಅಲ್ಲೂ ಆತ ಬಂದಿರಲಿಲ್ಲ. ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿತ್ತು. ಹೀಗಾಗಿ ಅವರ ತಂದೆ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ವ್ಯಕ್ತಿ ಅಪಹರಿಸಿ 20 ಲಕ್ಷಕ್ಕೆ ಬೇಡಿಕೆ: ಇನ್ನು ವ್ಯಕ್ತಿಯೊಬ್ಬರನ್ನು ಅಪಹರಿಸಿ 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದವರನ್ನು ದಾವಣಗೆರೆ ಪೋಲಿಸರು ಕೇವಲ 24 ಗಂಟೆಯಲ್ಲೇ ಭೇದಿಸಿ ಐವರ ಹೆಡೆಮುರಿಕಟ್ಟಿರುವ ಘಟನೆ ಇತ್ತೀಚೆಗೆ ನಡೆದಿತ್ತು. ಪ್ರಕರಣದಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ದಾವಣಗೆರೆಯ ಕೆಟಿಜೆ ನಗರ ಪೋಲಿಸರು ಯಶಸ್ವಿಯಾಗಿದ್ದರು.
ಇದನ್ನೂ ಓದಿ: ವ್ಯಕ್ತಿ ಅಪಹರಿಸಿ 20 ಲಕ್ಷಕ್ಕೆ ಬೇಡಿಕೆ: 24 ಗಂಟೆಯಲ್ಲೇ ಪ್ರಕರಣ ಭೇದಿಸಿದ ದಾವಣಗೆರೆ ಪೊಲೀಸರು
ಪಿಸ್ತೂಲ್ ತೋರಿಸಿ ಯುವತಿಯ ಅಪಹರಣ: ಮೂವರು ಯುವಕರು ರಾತ್ರಿ ಮನೆಯೊಂದಕ್ಕೆ ನುಗ್ಗಿ ಪಿಸ್ತೂಲ್ ತೋರಿಸಿ ಮನೆಯವರ ಮೇಲೆ ಹಲ್ಲೆ ನಡೆಸಿ 18 ವರ್ಷದ ಯುವತಿಯನ್ನು ಅಪಹರಿಸಿದ ಘಟನೆ ಪಂಜಾಬ್ನ ತರ್ನ್ ತರಣ್ ಜಿಲ್ಲೆಯ ಗಡಿಭಾಗದ ಪಹುವಿಂದ್ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಮನೆಗೆ ನುಗ್ಗಿದ ದುಷ್ಕರ್ಮಿಗಳು ಮೊದಲಿಗೆ ಯುವತಿಯ ತಾಯಿ, ಸಹೋದರಿ, ಸಹೋದರನಿಗೆ ಹೊಡೆದಿದ್ದರು. ನಂತರ ತಾಯಿಗೆ ಪಿಸ್ತೂಲ್ ತೋರಿಸಿ ಯುವತಿಯನ್ನು ಕಿಡ್ನಾಪ್ ಮಾಡಿದ್ದರು. ಇದರಿಂದ ಇಡೀ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.
ಇದನ್ನೂ ಓದಿ: ರಾತ್ರಿ ಮನೆಗೆ ನುಗ್ಗಿ, ಪಿಸ್ತೂಲ್ ತೋರಿಸಿ ಯುವತಿಯ ಅಪಹರಣ!