ವಿಜಯಪುರ: ಕೊರೊನಾ, ಲಾಕ್ಡೌನ್ನಿಂದ ಸಾಕಷ್ಟು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇಸ್ತ್ರಿ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ ಪಾರ್ಶ್ವವಾಯು ಪೀಡಿತ ವ್ಯಕ್ತಿಯೊಬ್ಬ ಔಷಧಿ ದೊರೆಯದೆ ನರಳಾಡುತ್ತಿದ್ದಾರೆ.
ಜಿಲ್ಲೆಯ ಕನ್ನೂರು ಗ್ರಾಮದ ಕೇದಾರಲಿಂಗ ವಿಠ್ಠಲ್ ಎಂಬ ವ್ಯಕ್ತಿ ನಗರದಲ್ಲಿ ಇಸ್ತ್ರೀ ಅಂಗಡಿ ಇಟ್ಟುಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದು, ಇವರಿಗೆ ಪತ್ನಿ, ಅಮ್ಮ, ಮೂವರು ಮಕ್ಕಳಿದ್ದಾರೆ. ಕುಟುಂಬದ ಪರಿಸ್ಥಿತಿ ಹೀಗಿರುವಾಗ ಕಳೆದ ನಾಲ್ಕು ವರ್ಷಗಳ ಹಿಂದೆ ವಿಠ್ಠಲ್ ಅವರಿಗೆ ಪಾರ್ಶ್ವವಾಯು ಬಂದೆರೆಗಿತು. ಈ ಮೂಲಕ ಇಡೀ ಕುಟುಂಬ ಬೀದಿಗೆ ಬಿದ್ದಂತಾಗಿದೆ. ಗಂಡ ಹಾಸಿಗೆ ಹಿಡಿದ್ದಿದ್ದರಿಂದ ಕುಟುಂಬ ನಿರ್ವಹಣೆಯ ಹೊಣೆಯನ್ನು ಪತ್ನಿ ಸುಪ್ರಿಯಾ ಹೊತ್ತುಕೊಂಡಿದ್ದಾರೆ.
ಈ ಬಡ ಕುಟುಂಬಕ್ಕೆ ಮತ್ತೊಂದು ಸಂಕಷ್ಟ ಎದುರಾಯಿತು. ಮೊದಲೇ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ವಿಠ್ಠಲ್ ಅವರಿಗೆ ಹೃದಯದ ಸಮಸ್ಯೆ ಕಾಣಿಸಿಕೊಂಡಿತು. ಇದು ಕುಟುಂಬಕ್ಕೆ ಗಾಯದ ಮೇಲೆ ಬರೆ ಎಳೆದಂತಾಯಿತು. ಕಾಯಿಲೆಯಿಂದ ಬಳಲುತ್ತಿರುವ ವಿಠ್ಠಲ್ಗೆ ವೈದ್ಯರು ಔಷಧಗಳನ್ನು ಪ್ರತಿದಿನ ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ. ಆದ್ರೆ ಈ ಔಷಧಿಗಳನ್ನು ತೆಗೆದುಕೊಳ್ಳಲು ಹಣವಿಲ್ಲದೆ ಕುಟುಂಬ ಪರದಾಡುತ್ತಿದೆ.
ಹೇಗೋ ಇಸ್ತ್ರೀ ಅಂಗಡಿಯನ್ನು ನಡೆಸಿಕೊಂಡು ಸುಪ್ರಿಯಾ ಹಣ ಹೊಂದಿಸಿ ಔಷಧಿ ಕೊಡಿಸುತ್ತಿದ್ದರು. ಆದ್ರೆ ಕಳೆದ ಒಂದು ತಿಂಗಳಿಂದ ಲಾಕ್ಡೌನ್ ಜಾರಿಯಲ್ಲಿದ್ದು, ಇಸ್ತ್ರಿ ಅಂಗಡಿಯನ್ನು ಬಾಗಿಲು ಹಾಕಲಾಗಿದೆ. ಈ ಕುಟುಂಬಕ್ಕೆ ಆಧಾರವಾಗಿದ್ದ ಅಂಗಡಿ ಬಂದ್ ಮಾಡಿದ್ದರಿಂದ ಕೆಲಸವೂ ಇಲ್ಲ, ಹಣವೂ ಇಲ್ಲದಂತಾಗಿದೆ. ಇದು ಬಡ ಕುಟುಂಬದ ಪಾಲಿಗೆ ನುಂಗಲಾರದ ತುತ್ತಾಗಿದೆ. ತಮಗೆ ಸಹೃದಯಿಗಳು ಸಹಾಯ ಮಾಡಿ ಎಂದು ಅಂಗಲಾಚಿದ್ದಾರೆ. ಇನ್ನು ಈ ಕುಟುಂಬಕ್ಕೆ ನೆರವು ನೀಡಬಯಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣ ನೀಡಬೇಕೆಂದು ಕೋರಿದ್ದಾರೆ.
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
- ಖಾತೆ ಸಂಖ್ಯೆ : 33466339028
- IFSC code : SBIN 0006708
- ಕನ್ನೂರು ಶಾಖೆ