ವಿಜಯಪುರ: ಅಕ್ರಮವಾಗಿ ಕಬ್ಬಿನ ಗದ್ದೆಯಲ್ಲಿ ಬೆಳೆದಿದ್ದ ಅಪಾರ ಪ್ರಮಾಣದ ಗಾಂಜಾವನ್ನು ಜಿಲ್ಲಾ ಅಬಕಾರಿ ಇಲಾಖೆಯ ನಾರ್ಕೋಟಿಕ್ಸ್ ಹಾಗೂ ಲಿಕ್ಕರ್ ವಿಭಾಗದ ಪೊಲೀಸರು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಕಾಖಂಡಕಿ ಗ್ರಾಮದ ಕಬ್ಬಿನ ಪಡದಲ್ಲಿ ಅಕ್ರಮವಾಗಿ ಬೆಳೆದಿದ್ದ, 70 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಒಟ್ಟು 130 ಕೆಜಿ ಗಾಂಜಾ ಜಪ್ತಿ ಮಾಡಿದ್ದು, ಇದರ ಬೆಲೆ ಗಾಂಜಾ ಮಾರುಕಟ್ಟೆಯಲ್ಲಿ 13 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಕಬ್ಬಿನ ಗದ್ದೆಯ ಮಾಲೀಕರಾದ ಗಂಗಪ್ಪ ನೀಲಜಗಿ ಹಾಗೂ ಮಹಾದೇವ ನೀಲಜಗಿ ತಲೆಮೆರೆಸಿಕೊಂಡಿದ್ದಾರೆ. ಇವರ ಬಂಧನಕ್ಕಾಗಿ ಅಬಕಾರಿ ಜಿಲ್ಲಾ ತಂಡವನ್ನು ರಚಿಸಲಾಗಿದೆ. ವಿಜಯಪುರ ಅಬಕಾರಿ ಇಲಾಖೆಯ ಉಪ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿರುವ ಕೆ. ಅರುಣಕುಮಾರ ಕೇವಲ 24 ಗಂಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಗಾಂಜಾ ವಶ ಪಡಿಸಿಕೊಂಡಿದ್ದಾರೆ.
ಜಿಲ್ಲೆಯ ಹಲವು ಭಾಗದಲ್ಲಿ ಈ ರೀತಿ ಹೊಲ, ತೋಟದಲ್ಲಿ ಅಕ್ರಮವಾಗಿ ಗಾಂಜಾ ಬೆಳೆಸಲಾಗುತ್ತಿರುವ ಮಾಹಿತಿ ಸಂಗ್ರಹಿಸಿರುವ ನಾರ್ಕೋಟಿಕ್ ವಿಭಾಗದ ಅಬಕಾರಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.