ವಿಜಯಪುರ: ರೋಗಿವೋರ್ವ ಸೂಕ್ತ ಚಿಕಿತ್ಸೆ ಸಿಗದೇ ಬೆತ್ತಲೆಯಾಗಿ ಬಿದ್ದು ನರಳಾಡಿದ ಹೃದಯ ವಿದ್ರಾವಕ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ.
ವೈದ್ಯೋ ನಾರಾಯಣ ಹರಿ ಅಂದ್ರೆ ವೈದ್ಯರು ದೇವರಿಗೆ ಸಮಾನ ಅಂತಾರೆ. ಆದ್ರೆ ಇಲ್ಲಿ ವೈದ್ಯರು ಚಿಕಿತ್ಸೆಗಾಗಿ ಬಂದ ರೋಗಿ ಬೆತ್ತಲೆಯಾಗಿ ಬಿದ್ದು ನರಳಾಡುತ್ತಿದ್ದರೂ ಸಹ ಇತ್ತ ಕಣ್ಣಾಯಿಸಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ರವಿ ಪಾಟೀಲ್ ಎಂಬ ವ್ಯಕ್ತಿ ಅತಿಸಾರ ಬೇದಿ ಅಂತಾ ಚಿಕಿತ್ಸೆಗೆ ಬಂದರೆ ಸೂಕ್ತ ಚಿಕಿತ್ಸೆ ನೀಡುವುದಿರಲಿ ವೈದ್ಯರು ಅವನತ್ತ ತಲೆ ಎತ್ತಿಯೂ ಸಹ ನೋಡಿಲ್ಲವಂತೆ. ಅಷ್ಟೇ ಅಲ್ಲದೆ ಅದೇ ವಾರ್ಡ್ ನ ಮತ್ತೊಂದು ಬೆಡ್ ನಲ್ಲಿ ನಾಯಿಯೊಂದು ಆರಾಮವಾಗಿ ಮಲಗಿದ್ದು, ಇದನ್ನು ಸಿಬ್ಬಂದಿ ನೋಡಿ ನೋಡದಂತೆ ಸಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಜಿಲ್ಲಾಸ್ಪತ್ರೆ ಸಿಬ್ಬಂದಿಯ ಈ ವರ್ತನೆಯನ್ನು ಕಂಡು ಕರವೇ ಮುಖಂಡ ಕೃಷ್ಣಾ ಈ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಜಿಲ್ಲಾಸ್ಪತ್ರೆಗೆ ಆಗಮಿಸುವ ರೋಗಿಯ ಇಂಥ ಸ್ಥಿತಿಗೆ ಕಾರಣವಾದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.