ವಿಜಯಪುರ : ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಾಣಂತಿಯರ ಸಮಸ್ಯೆ ಹಾಗೆ ಮುಂದುವರೆದಿದೆ. ಸಿಜೇರಿಯನ್ ಡೆಲಿವರಿ ಆದ ಬಾಣಂತಿಯರಿಗೆ ಶಸ್ತ್ರಚಿಕಿತ್ಸೆಯ ನಂತರ ಮಾಡಿದ ಹೊಲಿಗೆಗಳು ಬಿಚ್ಚಿರೋ ಘಟನೆಗಳು ನಡೆಯುತ್ತಿವೆ. ಏಪ್ರಿಲ್ 30 ರಿಂದ ಮೇ 13ರವರೆಗೆ 18 ಬಾಣಂತಿಯರಲ್ಲಿ ಈ ಸಮಸ್ಯೆ ಕಂಡು ಬಂದಿದೆ. ಇಂದು ಮತ್ತೆ ಐವರು ಬಾಣಂತಿಯರಿಗೆ ಇದೇ ಸಮಸ್ಯೆಯಿಂದ ಆಸ್ಪತ್ರೆಗೆ ಬಂದಿದ್ದಾರೆ ಎಂದು ಆಸ್ಪತ್ರೆ ಮೂಲಗಳಿಂದ ಮಾಹಿತಿ ಬಂದಿದೆ.
ಈ ಬಗ್ಗೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್ ಎಲ್ ಲಕ್ಕಣ್ಣನವರನ್ನು ಕೇಳಿದರೆ, ಇಂದು ಮತ್ತೆ ಐವರು ಬಾಣಂತಿಯರಿಗೆ ಮರಳಿ ಸಮಸ್ಯೆಯಾಗಿದೆ ಎನ್ನುವುದು ಸುಳ್ಳು ಮಾಹಿತಿ. ಇಂದು ಓರ್ವ ಬಾಣಂತಿಯರಿಗೆ ಮಾತ್ರ ಸಮಸ್ಯೆಯಾಗಿದೆ ಎಂದರು. ಹೊಲಿಗೆಗಳು ಬಿಡುವುದಕ್ಕೆ ಕಾರಣ ಬಾಣಂತಿಯರಿಗೆ ನೀಡುವ ಚಿಕಿತ್ಸೆ ಅಲ್ಲ, ಯಾರೂ ಭಯಗೊಳ್ಳಬಾರದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಇನ್ಪೆಕ್ಷನ್ ಆಗಿದ್ದಕ್ಕೆ ಸ್ಟಿಚ್ ಬಿಚ್ಚಿವೆ. ಎಲ್ಲರಿಗೂ ಸರಿಯಾದ ಚಿಕಿತ್ಸೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಈ ವಿಚಾರವಾಗಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರು ಪ್ರತಿಕ್ರಿಯಿಸಿದ್ದು, ಇದು ನೂರು ಬೆಡ್ನ ಆಸ್ಪತ್ರೆ, ಕೆಲಸದ ಒತ್ತಡ ಜಾಸ್ತಿ ಇದೆ. ಈ ತಿಂಗಳಲ್ಲಿ ಸುಮಾರು 96 ಸಿಜೇರಿಯನ್ ಮಾಡಿದ್ದಾರೆ. ಅದರಲ್ಲಿ ಕೆಲವರದ್ದು ಪಸ್ ಕಾಣಿಸಿಕೊಂಡಿದೆ. ಓವರ್ ಲೋಡ್ ಇರುವ ಕಾರಣ ಸರಿಯಾಗಿ ಸ್ವಚ್ಚತೆ ಮಾಡಲು ಆಗಿಲ್ಲ. ಇನ್ನೂ ಎಸಿ ಕೂಡಾ ರಿಪೇರಿಯಲ್ಲಿ ಇದೆ. ಇನ್ನೇರಡು ದಿನದಲ್ಲಿ ಎಲ್ಲವೂ ಸರಿಯಾಗುತ್ತದೆ. ಪೆಸೇಂಟ್ ಹೆಚ್ಚಿಗೆ ಬರುತ್ತಿರುವ ಕಾರಣ, ಇನ್ನೋಂದು ಒಟಿ ಮಾಡುವ ಕುರಿತು ಪರಿಶೀಲಿಸಲಾಗುವುದು. ಇಂದು ಬಾಣಂತಿಯರು ಹಾಗೂ ಅವರ ಪೋಷಕರೊಂದಿಗೆ ಮಾತನಾಡಿರುವೆ. ಇನ್ಪೆಕ್ಷನ್ ಕಂಟ್ರೋಲ್ ಆಗುತ್ತದೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರು ಕಣ್ಣೀರು ಹಾಕುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಬಾಣಂತಿಯರ ಪೋಷಕರು ಆಸ್ಪತ್ರೆಯ ಸಿಬ್ಬಂದಿ ವರ್ತನೆ ಬಗ್ಗೆಯೂ ಅಸಮಾಧಾನ ಹೊರ ಹಾಕಿದ್ದಾರೆ. ಪೋಷಕರು ನಾವು ಬಡವರು, ಜೀವದ ಜೊತೆಗೆ ಆಟವಾಡಬೇಡಿ, ಸೂಕ್ತ ಚಿಕಿತ್ಸೆ ನೀಡಿ ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಶಾಲಾ ಆರಂಭಕ್ಕೆ ಸಿದ್ದತೆ : ಖಾಯಂ ಶಿಕ್ಷಕರೇ ಇಲ್ಲದ ಉತ್ತರ ಕನ್ನಡದ 120 ಸರ್ಕಾರಿ ಶಾಲೆಗಳು