ವಿಜಯಪುರ: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಉತ್ತಮ ಮಳೆಯಿಂದ ಖುಷಿಯಲ್ಲಿ ಕೇಕೆ ಹಾಕಬೇಕಾಗಿದ್ದ ಅನ್ನದಾತ ಮತ್ತೆ ಸಂಕಷ್ಟಕ್ಕೆ ಸಿಲುಕಿ ಕೊಂಡಿದ್ದಾನೆ. ಅಧಿಕ ಮಳೆಯಿಂದ ಕಟಾವಿಗೆ ಬಂದಿದ್ದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ.
ಶನಿವಾರದವರೆಗೆ ಜಿಲ್ಲೆಯಲ್ಲಿ 16 ಸಾವಿರ ಹೆಕ್ಟರ್ ಗಿಂತ ಅಧಿಕ ವಿವಿಧ ಬೆಳೆಗಳು ನೀರಿನಲ್ಲಿ ನಿಂತಿದ್ದು, ಮತ್ತೆ ಅನ್ನದಾತ ಸರ್ಕಾರದ ಪರಿಹಾರ ದತ್ತ ಮುಖಮಾಡ ಬೇಕಾಗಿದೆ. ಮಳೆ ನಿಂತರೂ ಮಳೆಯ ಹನಿ ನಿಲ್ಲುವುದಿಲ್ಲ ಎನ್ನುವಂತೆ, ಕಳೆದ ಎರಡು ದಿನಗಳಿಂದ ಮತ್ತೆ ಮಳೆರಾಯ ತನ್ನ ರೌದ್ರಾವತಾರ ತಾಳಿದ್ದಾನೆ.
ಶನಿವಾರ ಒಂದೇ ದಿನ ಜಿಲ್ಲೆಯಲ್ಲಿ 34.58 ಮಿ.ಮೀಟರ್ ಮಳೆಯಾಗಿದೆ. ಭಾನುವಾರ ಸಹ ವಿಜಯಪುರ ಜಿಲ್ಲೆಯಲ್ಲಿ 17.84 ಮಿ.ಮೀಟರ್ ಮಳೆ ದಾಖಲಾಗಿದೆ. ವಿಜಯಪುರ ತಾಲೂಕಿನಲ್ಲಿ 9.12, ಬಬಲೇಶ್ವರ 11.93, ತಾಳಿಕೋಟೆ ತಾಲೂಕಿನಲ್ಲಿ ಅತಿ ಹೆಚ್ಚು 44.7, ತಿಕೋಟಾ 5.6, ಬಾಗೇವಾಡಿ 27.37, ನಿಡಗುಂದಿ 26.6, ಕೊಲ್ಹಾರ 12.1, ಮುದ್ದೇಬಿಹಾಳ 19.4, ಇಂಡಿ 1.6, ಚಡಚಣ 4.35, ಸಿಂದಗಿ 21.22 ಹಾಗೂ ದೇವರಹಿಪ್ಪರಗಿ ತಾಲೂಕಿನಲ್ಲಿ 30.1 ಮಿ.ಮೀಟರ್ ಮಳೆಯಾಗಿದೆ. ಮಳೆ ಮುಂದುವರೆದ ಪರಿಣಾಮ ಹೊಲದಲ್ಲಿ ನೀರು ನುಗ್ಗಿ, ಕೈಗೆ ಬಂದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ.
ಜಿಲ್ಲೆಯ 4.85 ಲಕ್ಷ ಹೆಕ್ಟರ್ ಪ್ರದೇಶದ ಕೃಷಿ ಭೂಮಿಯಲ್ಲಿ ಶೇ. 80 ರಷ್ಟು ತೊಗರಿ ಬೆಳೆಯಲಾಗಿತ್ತು. ಇದರ ಜತೆ ಸೂರ್ಯಕಾಂತಿ, ಸಜ್ಜೆ ಸೇರಿದಂತೆ ವಿವಿಧ ಬೆಳೆಗಳನ್ನು ಜಿಲ್ಲೆಯಲ್ಲಿ ಬೆಳೆಯಲಾಗಿದೆ. ಇನ್ನೇನು ಬೆಳೆ ಕಟಾವು ಹಂತಕ್ಕೆ ಬರುವಾಗಲೇ ಮಳೆ ಸುರಿದ ಕಾರಣ ಬೆಳೆ ನಾಶವಾಗಿದೆ. ಬಬಲೇಶ್ವರ ತಾಲೂಕಿನ ಸಾರವಾಡದಲ್ಲಿ 500 ಹೆಕ್ಟರ್ ನಷ್ಟು ಬೆಳೆ ನಾಶವಾಗಿದೆ. ಕಾಖಂಡಕಿ, ತಿಕೋಟಾ, ಹೊನಗನಹಳ್ಳಿ, ಮುದ್ದೇಬಿಹಾಳ, ತಾಳಿಕೋಟೆ, ಬಾಗೇವಾಡಿ, ಸಿಂದಗಿ ಸೇರಿದಂತೆ ಬಹುತೇಕ ತಾಲೂಕುಗಳಲ್ಲಿ ಭಾರಿ ಮಳೆಯಿಂದ ಕೋಟ್ಯಾಂತರ ರೂ. ಮೌಲ್ಯದ ಬೆಳೆ ನಷ್ಟವಾಗಿದೆ.
ನಾಲ್ಕು ದಿನಗಳ ಹಿಂದೆ ಕೃಷಿ ಇಲಾಖೆ ಜಿಲ್ಲೆಯಲ್ಲಿ ಮಳೆಯಿಂದ ಬೆಳೆ ನಷ್ಟ ಕುರಿತು ವರದಿ ಸಿದ್ದಪಡಿಸಿದೆ ಎನ್ನಲಾಗಿದೆ. ವರದಿಯಂತೆ 13,592 ಸಾವಿರ ಹೆಕ್ಟರ್ ಬೆಳೆ ಹಾನಿಯಾಗಿದೆ. ಇದರ ಅಂದಾಜು ನಷ್ಟ 52,87 ಕೋಟಿ ರೂ. ಈಗ ಮತ್ತೆ ಮೂರು ದಿನ ಸತತ ಮಳೆಯಾಗುತ್ತಿದೆ. ಕನಿಷ್ಠ 2 ಸಾವಿರ ಹೆಕ್ಟರ್ ನಷ್ಟು ಮತ್ತೊಮ್ಮೆ ಹೆಚ್ಚುವರಿ ಬೆಳೆ ನಾಶವಾಗಿದೆ. ಒಟ್ಟು ಇಲ್ಲಿಯವರೆಗೆ 18 ಸಾವಿರ ಹೆಕ್ಟರ್ ಪ್ರದೇಶದ ಬೆಳೆ ನಷ್ಟವಾಗಿದ್ದು, ಇದರ ಬೆಲೆ 60 ಕೋಟಿ ರೂ. ಎಂದು ಕೃಷಿ ಇಲಾಖೆ ಅಂದಾಜಿಸಿದೆ. ಇನ್ನೂ ಪೂರ್ಣ ಪ್ರಮಾಣದ ಬೆಳೆ ನಾಶದ ವರದಿ ಬರಬೇಕಾಗಿದೆ.
ಕೇವಲ ಒಣ ಬೇಸಾಯದ ಬೆಳೆಯೇ 60 ಕೋಟಿ ರೂ.ದಷ್ಟು ನಷ್ಟವಾಗಿದ್ದರೆ, ಇನ್ನೂ ತೋಟಗಾರಿಕೆ ಬೆಳೆಯ ನಷ್ಟ ಅಂದಾಜಿಗೆ ಸಿಕ್ಕಿಲ್ಲ. ತೋಟಗಾರಿಕೆ ಬೆಳೆ ನಷ್ಟದ ಸಮೀಕ್ಷೆ ನಡೆಸಲಾಗುತ್ತಿದೆ. ಅದರಲ್ಲಿ ಅತಿ ಹೆಚ್ಚು ದ್ರಾಕ್ಷಿ, ದಾಳಿಂಬೆ ಸೇರಿದಂತೆ ಹಲವು ಬೆಳೆಗಳು ನೆಲಕಚ್ಚಿವೆ. ಅದರ ಅಂದಾಜು ಸಿದ್ದಪಡಿಸಿದ ಮೇಲೆ ಜಿಲ್ಲಾಧಿಕಾರಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸಲ್ಲಿಸಿದ ವರದಿ ನಂತರ ಎಷ್ಟು ಪ್ರಮಾಣದ ಬೆಳೆ ನಷ್ಟವಾಗಲಿದೆ ಎಂಬ ನಿಖರ ಮಾಹಿತಿ ದೊರೆಯಲಿದೆ.
ಮನೆ ಹಾನಿ:
ಜಿಲ್ಲೆಯಲ್ಲಿ ಮಳೆಯಿಂದ ಇಲ್ಲಿಯವರೆಗೆ 303 ಮನೆಗಳು ಭಾಗಶ ಹಾನಿಯಾಗಿದೆ. 3 ಮನೆಗಳು ಸಂಪೂರ್ಣ ಕುಸಿದು ಬಿದ್ದಿದೆ. ದೇವರಹಿಪ್ಪರಗಿಯಲ್ಲಿ 56, ಸಿಂದಗಿ 35, ಮುದ್ದೇಬಿಹಾಳ 107, ಬಾಗೇವಾಡಿ 32 ಮನೆಗೆ ಹಾನಿಯಾಗಿದೆ. ವಿಜಯಪುರದಲ್ಲಿ 2 ಹಾಗೂ ದೇವರಹಿಪ್ಪರಗಿಯಲ್ಲಿ ಒಂದು ಮನೆ ಸಂಪೂರ್ಣ ಬಿದ್ದಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.