ವಿಜಯಪುರ: ಕೋವಿಡ್ ಕಾರಣಕ್ಕೆ ಲಾಕ್ ಆಗಿದ್ದ ಶಾಲಾ ಕಾಲೇಜುಗಳು 10 ತಿಂಗಳ ಬಳಿಕ ಅಂದರೆ ಇಂದು ಆರಂಭವಾಗಿವೆ. ಕೋವಿಡ್ ಹಿನ್ನೆಲೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಬೆಳಗ್ಗೆಯಿಂದಲೇ ಮಕ್ಕಳು ತಮ್ಮ ಪೋಷಕರ ಜೊತೆ ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ನಗರದ ರವೀಂದ್ರನಾಥ ಟ್ಯಾಗೋರ್ ಶಾಲೆಯಲ್ಲಿ, ಮಕ್ಕಳು ಶಾಲೆ ಪ್ರವೇಶಿಸುವ ಮೊದಲು ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳನ್ನು ಸ್ಯಾನಿಟೈಸ್ ಮಾಡಿ ಟೆಂಪರೇಚರ್ ಚೆಕ್ ಮಾಡಿ ಒಳ ಬಿಡುತ್ತಿದ್ದಾರೆ. ಶಾಲೆಗೆ ಆಗಮಿಸುತ್ತಿರುವ ವಿದ್ಯಾರ್ಥಿಗಳ ಆರೋಗ್ಯದ ಮಾಹಿತಿ ಕೇಳಿ ಶಾಲಾ ಆವರಣಕ್ಕೆ ಪ್ರವೇಶ ನೀಡಲಾಗುತ್ತಿದೆ.
ಮೈಕ್ ಮೂಲಕ ಕೊರೊನಾ ಸುರಕ್ಷತಾ ನಿಯಮಗಳನ್ನು ಶಾಲಾ ಆಡಳಿತ ಮಂಡಳಿಯವರು ಮಕ್ಕಳಿಗೆ ಹಾಗೂ ಪೋಷಕರಿಗೆ ನೀಡುತ್ತಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ತಪಾಸಣೆ ಬಳಿಕವೇ ಶಾಲಾ ಆವರಣಕ್ಕೆ ಪ್ರವೇಶ ನೀಡಲಾಗುತ್ತಿದೆ. ಇನ್ನೂ ಪೋಷಕರು ಖುದ್ದು ನಿಂತು ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿ ಶಾಲೆಗೆ ಕಳುಹಿಸುತ್ತಿದ್ದಾರೆ.
ಜಿಲ್ಲಾಧಿಕಾರಿ ಮಾಹಿತಿ: ಇದೇ ವೇಳೆ ಸುದ್ದಿಗಾರರೊಂದಿಗೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾತನಾಡಿ, ಸರ್ಕಾರದ ಆದೇಶದಂತೆ ಇಂದಿನಿಂದ ಶಾಲೆ ಆರಂಭಿಸಲಾಗಿದೆ. ಜ್ವರ ಇನ್ನಿತರೆ ಆರೋಗ್ಯ ಸಮಸ್ಯೆ ಇದ್ದ ಮಕ್ಕಳಿಗೆ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ನಡೆಸಲಾಗುತ್ತದೆ. ಶಾಲೆಗಳಲ್ಲಿ ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಬಳಕೆಗೆ ಕಡ್ಡಾಯವಾಗಿ ಆದೇಶಿಸಲಾಗಿದೆ. ಶಿಕ್ಷಕರು, ಮಕ್ಕಳು ತಾವೇ ಸ್ವ್ಯಾಬ್ ನೀಡಿದಲ್ಲಿ ಶಾಲೆಗಳಲ್ಲೇ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗುವುದು.
ಈ ಸುದ್ದಿಯನ್ನೂ ಓದಿ: ದಾವಣಗೆರೆ: ವಿದ್ಯಾರ್ಥಿಗಳನ್ನು ಸ್ವಾಗತಿಸಲು ಸಜ್ಜಾದ ಶಾಲಾ - ಕಾಲೇಜುಗಳು
ಶಾಲಾ ಮಕ್ಕಳು ಕೈ ತೋರಿಸಿದಲ್ಲಿ ಬಸ್ಗಳನ್ನು ನಿಲ್ಲಿಸುವಂತೆ ನಗರ ಸಂಚಾರ ಮತ್ತು ಕೆಎಸ್ಆರ್ಟಿಸಿ ಸಿಬ್ಬಂದಿಗೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದರು. ಮಕ್ಕಳಿಗೆ ಶಾಲೆಗೆ ಹೋಗಲು ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಡ್ಡಾಯ ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಬಳಕೆಗೆ ಗ್ರಾ.ಪಂ. ಮಟ್ಟದಲ್ಲಿ ಪಿಡಿಓ, ಪುರಸಭೆ, ನಗರಸಭೆ ಮುಖ್ಯಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.