ಮುದ್ದೇಬಿಹಾಳ : ತಾಲೂಕಿನ ನಾಲತವಾಡ ಪಟ್ಟಣ ಪಂಚಾಯತ್ ಗೆ ಸೇರಿದ ನೀರು ಶುದ್ಧೀಕರಣ ಘಟಕದ ಆವರಣದಲ್ಲಿ ಪಪಂ ಸಿಬ್ಬಂದಿ ಬಾಡೂಟ ತಯಾರಿಸಿ ಗುಂಡು ಪಾರ್ಟಿ ಮಾಡಿದ ಪ್ರಕರಣಕ್ಕೆ ಸಂಬoಧಿಸಿದoತೆ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ಅವರು ಓರ್ವ ಎಸ್ಡಿಸಿ ನೌಕರನನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಇನ್ನಿಬ್ಬರು ನೌಕರರನ್ನು ಬೇರೆ ಕಡೆಗೆ ವರ್ಗಾವಣೆ ಮಾಡುವ ಮೂಲಕ ಶಿಸ್ತು ಕ್ರಮ ಜರುಗಿಸಿದ್ದಾರೆ.

ನೀರು ಶುದ್ಧೀಕರಣ ಘಟಕದಲ್ಲಿ ಗುಂಡು ಪಾರ್ಟಿ ಮಾಡಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು, ಪಪಂ ಎಸ್ಡಿಸಿ ಬಿ ಪಿ ಹಜೇರಿ ಅವರಿಗೆ ನೋಟಿಸ್ ನೀಡಿದ್ದರು. ಅಲ್ಲದೇ 2019ರಿಂದ 2021ರ ಅವಧಿಯಲ್ಲಿ 585 ದಿನಗಳ ಕಾಲ ಅನಧಿಕೃತವಾಗಿ ಗೈರು ಹಾಜರಾಗಿರುವುದನ್ನು ಪರಿಗಣಿಸಿದ್ದರು.
ಸದರಿ ನೌಕರ ಅನಧಿಕೃತವಾಗಿ ಗೈರು ಹಾಜರಾಗಿ ಸಾರ್ವಜನಿಕರ ಕೆಲಸಗಳಿಗೆ ತೊಂದರೆಯುoಟಾಗಿದ್ದು ಮತ್ತು ಇವರಿಂದ ಕರವಸೂಲಿ ಸೇರಿದಂತೆ ಇನ್ನಿತರೆ ಕೆಲಸಗಳು ಕುಂಠಿತಗೊಂಡಿವೆ ಎಂದು ಪ.ಪಂ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ ಅವರು ಡಿಸಿ ಅವರಿಗೆ ವರದಿ ನೀಡಿದ್ದರು.
ಪ.ಪಂ ವ್ಯಾಪ್ತಿಗೆ ಸೇರಿರುವ ನೀರು ಶುದ್ಧೀಕರಣ ಘಟಕವು ನಿಷೇಧಿತ ಪ್ರದೇಶವಾಗಿದ್ದು, ಇಲ್ಲಿ ಊಟ ಮಾಡಿ ಕುಡಿದ ಮತ್ತಿನಲ್ಲಿ ಪತ್ರಿಕಾ ವರದಿಗಾರರೊಂದಿಗೆ ಮಾತನಾಡಿರುವುದು ದುರ್ನಡತೆಯಾಗಿದ್ದು, ತೀವ್ರತರ ಲೋಪವಾಗಿದೆ. ಹಾಗಾಗಿ, ಸದರಿ ನೌಕರನನ್ನು ಸೇವೆಯಿಂದ ಅಮಾನತುಗೊಳಿಸಿರುವುದಾಗಿ ಜಿಲ್ಲಾಧಿಕಾರಿಗಳು ಆ.19ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ನೀರು ಶುದ್ಧೀಕರಣ ಘಟಕದಲ್ಲಿ ನೌಕರರ ಬಾಡೂಟ, ಗುಂಡು ಪಾರ್ಟಿ : ದುರ್ವರ್ತನೆಗೆ ವ್ಯಾಪಕ ಟೀಕೆ
ಇನ್ನುಳಿದಂತೆ ಸಿಂಧಗಿ ಪುರಸಭೆ ನಿಯೋಜನೆ ಮೇಲೆ ನಾಲತವಾಡದಲ್ಲಿ ಸೇವೆ ಸಲ್ಲಿಸುತ್ತಿದ್ದ ಎಫ್.ಡಿ.ಸಿ ಅನಿಲ್ ಚಟ್ಟೇರ್ ಅವರನ್ನು ಆಲಮೇಲ್ ಪ.ಪಂಗೆ ನಿಯೋಜನೆ ಮಾಡಿದ್ರೆ, ಆರೋಗ್ಯ ನಿರೀಕ್ಷಕ ಚಂದ್ರಶೇಖರ್ ಸಗರ ಅವರನ್ನು ಕೊಲ್ಹಾರ ಪ.ಪಂಗೆ ವರ್ಗಾಯಿಸಲಾಗಿದೆ. ಕೊಲ್ಹಾರ ಪ.ಪಂ ಆರೋಗ್ಯ ನಿರೀಕ್ಷಕ ಅರವಿಂದ ಬಂಡಿ ಅವರನ್ನು ನಾಲತವಾಡಕ್ಕೆ ವರ್ಗಾಯಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿರುವ ಜಿಲ್ಲಾಧಿಕಾರಿಗಳ ಆದೇಶಕ್ಕೆ ದಲಿತಪರ, ಪ್ರಗತಿಪರ ಸಂಘಟನೆಯ ಮುಖಂಡರು ಸ್ವಾಗತಿಸಿದ್ದಾರೆ.