ವಿಜಯಪುರ: ತೀವ್ರ ಶ್ವಾಸಕೋಶ ತೊಂದರೆ ಸಂಬಂಧಿತ ರೋಗಿಗಳು ಕಂಡುಬಂದ ತಕ್ಷಣ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಗಮನಕ್ಕೆ ತರುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಖಾಸಗಿ ಆಸ್ಪತ್ರೆ ವೈದ್ಯರಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕೊರೊನಾ ವೈರಸ್ ಕುರಿತಂತೆ ಎಲ್ಲರೂ ಎಚ್ಚರಗೊಳ್ಳಬೇಕಾದ ಅಗತ್ಯವಿದೆ. ವಿಶೇಷವಾಗಿ ತೀವ್ರ ರೀತಿಯ ಶ್ವಾಸಕೋಶ ತೊಂದರೆ ಸಂಬಂಧಿತ ಸಂಶಯಾಸ್ಪದ ರೋಗಿಗಳು ಚಿಕಿತ್ಸೆಗೆ ಬಂದ ತಕ್ಷಣ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಗಮನಕ್ಕೆ ತರಬೇಕು. ವೈದ್ಯರು ಭಯಪಡದೆ ತಮ್ಮ ಸಾಮಾಜಿಕ ಸೇವೆಯನ್ನು ಎಂದಿನಂತೆ ಮುಂದುವರೆಸಿ ಎಂದು ಮನವಿ ಮಾಡಿದರು.
ಯಾವುದೇ ರೀತಿಯ ಜ್ವರ, ನೆಗಡಿ, ಕೆಮ್ಮು ಮತ್ತು ತೀವ್ರ ಶ್ವಾಸಕೋಶ ತೊಂದರೆ ಸಂಬಂಧಿತ ರೋಗಿಗಳು ಕೌಟುಂಬಿಕ ವೈದ್ಯರಿಗೆ ಪ್ರಾಥಮಿಕವಾಗಿ ಚಿಕಿತ್ಸೆಗೆ ಒಳಪಡುವುದರಿಂದ ತಮ್ಮ ಅನುಭವ ಆಧಾರದ ಮೇಲೆ ಕೋವಿಡ್-19 ಲಕ್ಷಣಗಳನ್ನು ಗುರುತಿಸಲು ಪ್ರಯತ್ನಿಸಬೇಕು. ವೈದ್ಯರಿಗೆ ಯಾವುದೇ ರೀತಿಯ ಭಯ ಬೇಡ. ತುರ್ತು ಮತ್ತು ಯುದ್ಧ ರೀತಿ ಸಂದರ್ಭ ಇದಾಗಿದ್ದು, ತಮ್ಮ ಅಮೂಲ್ಯವಾದ ಸೇವೆ ಸಮಾಜಕ್ಕೆ ಅವಶ್ಯಕತೆ ಇದೆ. ಪ್ರಾಮಾಣಿಕ ಪ್ರಯತ್ನವಿರಲಿ ಎಂದರು.
ಅವರು, ಕೋವಿಡ್-19 ಸಂಶಯಾಸ್ಪದ ರೋಗಿಗಳನ್ನು ಪ್ರತ್ಯೇಕವಾಗಿ ಆಸ್ಪತೆಯಲ್ಲಿಯೇ ಚಿಕಿತ್ಸೆ ಜೊತೆಗೆ ಗಂಟಲು ದ್ರವ ಮಾದರಿಯನ್ನು ಪಡೆದು ತೀವ್ರ ಚಿಕಿತ್ಸೆಗೆ ಒಳಪಡಿಸುವ ಸಂದರ್ಭದಲ್ಲಿ ತಾವು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದಲ್ಲಿ ತಕ್ಷಣ ಸ್ಪಂದಿಸುವುದಾಗಿ ಭರವಸೆ ನೀಡಿದರು. ಜಿಲ್ಲೆಯ ಖಾಸಗಿ ವೈದ್ಯರಿಂದ ಜಿಲ್ಲಾಡಳಿತ ಸಹಕಾರ ಬಯಸಿದ್ದು, ಒಂದು ವೇಳೆ ಕೋವಿಡ್-19 ಪಾಸಿಟಿವ್ ಪ್ರಕರಣ ಬಂದಲ್ಲಿ ತಜ್ಞ ವೈದ್ಯರ ಸಲಹೆಯ ಅವಶ್ಯಕತೆ ಜೊತೆಗೆ ಸಂಬಂಧಿಸಿದ ರೋಗಿಯ ಜೀವ ಉಳಿಸಲು ಪ್ರಥಮ ಆದ್ಯತೆ ನೀಡಲಾಗುತ್ತಿದೆ. ವೈದ್ಯರು ಕೂಡಾ ಈ ಕುರಿತು ಸ್ವಯಂ ಪ್ರೇರಿತರಾಗಿ ಸೇವೆ ಸಲ್ಲಿಸಲು ಐ.ಎಂ.ಎ ಅಧ್ಯಕ್ಷರ ಮೂಲಕ ಹೆಸರು ನೀಡುವಂತೆ ತಿಳಿಸಿದರು.
ಲಾಕ್‍ಡೌನ್ ಇದ್ದರು ಕೂಡ ತಾಲೂಕು ಕೇಂದ್ರ ಮತ್ತು ವಿವಿಧ ತಾಲೂಕುಗಳಲ್ಲಿ ಓಪಿಡಿ ಮತ್ತು ಐಪಿಡಿಗಳನ್ನು ನಿರ್ಭಿತಿಯಿಂದ ಆರಂಭಿಸಿ ಜನತೆಗೆ ನೆರವಾಗಬೇಕು. ಜಿಲ್ಲಾ ಪೊಲೀಸ್ ಇಲಾಖೆ ಮೂಲಕ ಸೂಕ್ತ ಸಹಕಾರ ಸಹ ನೀಡಲಾಗುತ್ತದೆ. ವಿವಿಧ ಖಾಸಗಿ ಆಸ್ಪತ್ರೆಗಳ ಔಷಧಿಯ ವಾಹನಗಳ ಮೂಲಕ ಆಮದಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಅಂತಹ ವಾಹನಗಳಿಗೆ ಜಿಲ್ಲಾಡಳಿತದ ವತಿಯಿಂದ ಪಾಸ್ ವಿತರಣೆ ಮಾಡಲಾಗುವುದು. ರಾಜ್ಯದಲ್ಲಿ 191 ಸೋಂಕಿತರಲ್ಲಿ 6 ಜನರು ನಿಧನ ಹೊಂದಿದ್ದಾರೆ. ವೈದ್ಯರ ಅತೀಯಾದ ನಿರ್ಲಕ್ಷ್ಯ ಸಂದರ್ಭದಲ್ಲಿ ಮಾತ್ರ ಪ್ರಕರಣ ದಾಖಲಾಗಿದ್ದಕ್ಕೆ ಜಿಲ್ಲೆಯ ವೈದ್ಯರು ತಮ್ಮ ಆತ್ಮಸ್ಥೆರ್ಯ ಕಳೆದುಕೊಳ್ಳಬೇಕಾಗಿಲ್ಲ. ಶೇಕಡಾ 100 ರಷ್ಟು ಕೋವಿಡ್ ಲಕ್ಷಣ ಕಂಡುಬಂದಾಗ ನಿರ್ಲಕ್ಷ್ಯ ತೋರಿದವರ ವಿರುದ್ಧ ಮಾತ್ರ ಕಾನೂನಿನ ರೀತಿಯ ಕ್ರಮ ಆಗಲಿದ್ದು, ಸದ್ಯಕ್ಕೆ ಜಿಲ್ಲೆಯ ವೈದ್ಯರು ಎದೆಗುಂದದೆ ತಮ್ಮ ಸೇವೆಯನ್ನು ಸಾರ್ವಜನಿಕರಿಗೆ ನೀಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಮಾತನಾಡಿ, ಕೋವಿಡ್-19 ಸಾಂಕ್ರಾಮಿಕ ರೋಗವಾಗಿದ್ದು, ಸಮಾಜಕ್ಕೆ ಮಾರಕವಾಗಿದೆ. ವೈದ್ಯರು ಇಂತಹ ರೋಗಿಗಳ ಬಗ್ಗೆ ಯಾವುದೇ ನಿರ್ಲಕ್ಷ್ಯ ಧೋರಣೆ ಅನುಸರಿಸದೆ ನೇರವಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯೊಂದಿಗೆ ಸಂಪರ್ಕ ಸಾಧಿಸಬೇಕು. ಸತ್ಯಾ ಸತ್ಯತೆ ಆಧಾರದ ಮೇಲೆ ಪೊಲೀಸ್ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತದೆ. ಈ ಕುರಿತು ಧ್ಯೆರ್ಯದಿಂದ ಇರಿ. ಗುರುತಿನ ಚೀಟಿಗಳನ್ನು ತಪ್ಪದೆ ಸೇವೆ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ತೋರಿಸಿ ಎಂದರು.