ವಿಜಯಪುರ: ಕೊರೊನಾ ಸೋಂಕು ಪೀಡಿತೆ ವೈದ್ಯ ವಿದ್ಯಾರ್ಥಿನಿಯ ಫೋಟೋವನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯೊಬ್ಬರಿಗೆ ಸೋಂಕು ತಗುಲಿರುವುದು ನಿನ್ನೆಯಷ್ಟೇ ದೃಢಪಟ್ಟಿತ್ತು. 25 ವರ್ಷದ ರೋಗಿ ಸಂಖ್ಯೆ 429 ವಿದ್ಯಾರ್ಥಿನಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಹರಿಬಿಟ್ಟಿದ್ದು ಭಾರಿ ಮುಜುಗರಕ್ಕೆ ಕಾರಣವಾಗಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿದವರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ವೈದ್ಯ ವಿದ್ಯಾರ್ಥಿನಿಗೆ ಸೋಂಕು ಹೇಗೆ ತಗುಲಿತು ಎಂಬುದರ ಕುರಿತು ಈಗಾಗಲೇ ಮೂವರು ವೈದ್ಯರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ವೈರಸ್ ಲಕ್ಷಣಗಳು ಕಂಡು ಬಂದ ಹಿನ್ನೆಲೆ, ಕಳೆದ ಏಪ್ರಿಲ್ 17 ರಂದು ಸ್ವತಃ ಕ್ವಾರಂಟೈನ್ಗೆ ವಿದ್ಯಾರ್ಥಿನಿ ಒಳಗಾಗಿದ್ದರು. ನಿನ್ನೆ ವೈರಸ್ ತಗುಲಿರುವುದು ದೃಢಪಟ್ಟಿದೆ. ಸದ್ಯ ವಿದ್ಯಾರ್ಥಿನಿ ಆರೋಗ್ಯ ಸ್ಥಿರವಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.