ವಿಜಯಪುರ: ಇಷ್ಟು ದಿನ ತಣ್ಣಗಿದ್ದ ಭೀಮಾತೀರದಲ್ಲೀಗ ಮತ್ತೆ ರಕ್ತ ಹರಿಯುತ್ತಾ ಎಂಬ ಅನುಮಾನ ಜನರಲ್ಲಿ ಶುರುವಾಗಿದೆ. ನನ್ನ ಪಾಡಿಗೆ ನಾನಿರುತ್ತೇನೆ. ಆದರೆ, ನನ್ನ ಕೆದಕಲು ಬಂದರೆ ಹಣೆಗೆ ಬಂದೂಕು ಇಟ್ಟು ಹೋಡಿತಿನಿ ಎಂದು ಭೀಮಾತೀರದ ಹಂತಕನ ಬಲಗೈ ಬಂಟ ಬಾಗಪ್ಪ ಹರಿಜನ ತನ್ನ ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾನೆ.
ಪ್ರಕರಣವೊಂದರ ವಿಚಾರಣೆಗಾಗಿ ಕೋರ್ಟ್ಗೆ ಬಂದಿದ್ದ ಬಾಗಪ್ಪ ಹರಿಜನ್, ನನ್ನ ಉಸಾಬರಿಗೆ ಯಾರಾದರು ಬಂದರೆ 24 ಗಂಟೆಗಳಲ್ಲಿಯೇ ಬಂದೂಕು ಹಿಡಿಯುತ್ತೇನೆ. ಮನೆಗೆ ಹೊಕ್ಕು, ಹಣೆಗೆ ಹಚ್ಚಿ ಹೊಡೆಯುತ್ತೇನೆ ಎಂದು ಗುಡುಗಿದ್ದಾನೆ. ಭೀಮಾತೀರದ ಹಂತಕನಾಗಿದ್ದ, ಪೊಲೀಸ್ ಎನಕೌಂಟರ್ಗೆ ಬಲಿಯಾದ ಚಂದಪ್ಪ ಹರಿಜನ ಸಂಬಂಧಿಕರು ನನಗೆ ಕಿರುಕುಳ ಕೊಡುತ್ತಿದ್ದಾರೆ. ನಾನೂ ಕಮಜೋರ್ ಅಲ್ಲ ಎಂದು ಚಂದಪ್ಪ ಹರಿಜನ ಸಂಬಂಧಿಕರಿಗೆ ಎಚ್ಚರಿಕೆ ನೀಡಿದ್ದಾನೆ.
ಆಸ್ತಿ ವಿಚಾರವಾಗಿ ಚಂದಪ್ಪನ ಕುಟುಂಬಸ್ಥರು ಹಾಗೂ ನನ್ನ ಮಧ್ಯೆ ದ್ವೇಷ ಉಂಟಾಗಿದೆ ಎಂದು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದೆಲ್ಲಾ ಸುಳ್ಳು. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ ಎಂದಿದ್ದಾನೆ. ಇನ್ನು ಜಿಲ್ಲೆಯಲ್ಲಿ ಬಾಗಪ್ಪನ ಹೆಸರಿನಲ್ಲಿ ವಸೂಲಿ ದಂಧೆ ನಡೆಯುತ್ತಿದೆ ಎಂಬ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ಬಾಗಪ್ಪ ಹರಿಜನ, ನನ್ನ ಹೆಸರು ಹೇಳಿ ಕೆಲವರು ವಸೂಲಿ ದಂಧೆ ಮಾಡುತ್ತಿದ್ದಾರೆ. ಅವರಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾನೆ.
ಇನ್ನು ತನ್ನ ಹೆಸರಲ್ಲಿ ವಸೂಲಿ ನಡೆಯುತ್ತಿದೆ ಎಂದು ಬಾಗಪ್ಪ ಮಾಡಿದ್ದ ಆರೋಪದ ಬಗ್ಗೆ ಕಿರಣ್ ಸ್ಪಷ್ಟನೆ ನೀಡಿದ್ದಾನೆ. ಬಾಗಪ್ಪ ಮಾಡಿರುವ ಆರೋಪ ಸುಳ್ಳು. ತಾನು ಬಾಗಪ್ಪನ ಸಹಚರ ಎಂದು ಹೇಳಿಕೊಂಡು ಹಣ ಸುಲಿಗೆ ಮಾಡಿಲ್ಲ ಎಂದು ಕಿರಣ್ ಹೇಳಿದ್ದಾನೆ.