ವಿಜಯಪುರ: ಗುಮ್ಮಟ ನಗರಿಯಲ್ಲಿ ಗಾಂಜಾ ಗ್ಯಾಂಗ್ ಕಳ್ಳರ ಹಾವಳಿ ಹೆಚ್ಚಾಗಿದೆ. ಗಾಂಜಾ, ಅಫೀಮು, ಮದ್ಯ ಸೇವಿಸಿ ವಿವಿಧ ಬಡಾವಣೆಗೆ ತೆರಳುವ ಖದೀಮರು ಮನೆ ಮುಂದೆ ನಿಲ್ಲಿಸುವ ಬೈಕ್, ಸೈಕಲ್ ಜತೆಗೆ ಮನೆ ಬಾಗಿಲು ಮುರಿದು ಮೊಬೈಲ್ ಕಳ್ಳತನ ಮಾಡುತ್ತಿದ್ದಾರೆ.
ರೈಲ್ವೆ ಸ್ಟೇಶನ್ ರಸ್ತೆಯ ಜಾಡರ ಓಣಿಯಲ್ಲಿ ಕಳೆದ 15 ದಿನಗಳಿಂದ ಕಳ್ಳರ ಹಾವಳಿ ಹೆಚ್ಚಾಗಿದೆ. ಇದನ್ನು ತಡೆಯುವ ಉದ್ದೇಶದಿಮದ ಓಣಿಯ ಯುವಕರೇ ವಾಟ್ಸ್ ಆ್ಯಪ್ ಗ್ರೂಪ್ ಮಾಡಿಕೊಂಡು ಪಾಳಿಯಂತೆ ಓಣಿ ಕಾಯುವ ಕೆಲಸ ಮಾಡುತ್ತಿದ್ದಾರೆ. ಮನೆಯ ಮಹಡಿ, ಕಾರಿನಲ್ಲಿ ಅವಿತುಕೊಂಡು ಕಳ್ಳರನ್ನು ಹಿಡಿಯಲು ಜಾಲ ಬೀಸಿದ್ದರು. ಎರಡು ದಿನಗಳ ಹಿಂದೆ ಚಾಲಾಕಿಯೋರ್ವ ಕಳ್ಳತನಕ್ಕೆ ಬಂದಿದ್ದ ವೇಳೆ ಆತನನ್ನು ಹಿಡಿದ ಯುವಕರು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ.
ಪೂರ್ವ ಸಿದ್ಧತೆಯಾಗಿ ಯಾರಾದರೂ ಕಳ್ಳತನಕ್ಕೆ ಅಡ್ಡಿಪಡಿಸಿದರೆ ಅಂತವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಆರೋಪಿ ಚಾಕು ಇಟ್ಟುಕೊಂಡು ಬಂದಿದ್ದ. ಆದರೆ ಈ ಬಾರಿ ಆತನ ನಶೀಬು ಕೈಕೊಟ್ಟು ಹತ್ತಾರು ಯುವಕರ ಕೈಗೆ ಸಿಕ್ಕು ಧರ್ಮದೇಟು ತಿಂದಿದ್ದಾನೆ.
ನಂತರ ಯುವಕರು ಕಳ್ಳನನ್ನು ಗೋಲಗುಮ್ಮಟ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಗಾಂಜಾ ಗ್ಯಾಂಗ್ನಲ್ಲಿ 10-15 ಮಂದಿ ಕಳ್ಳರಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ನಗರದ ಸುತ್ತಮುತ್ತಲಿನ ಪ್ರದೇಶದವರೇ ಈ ಕೃತ್ಯ ಮಾಡುತ್ತಿರುವ ಮಾಹಿತಿ ಪಡೆದಿರುವ ಪೊಲೀಸರು ಅವರ ಬಂಧನಕ್ಕೆ ಬಲೆ ಬೀಸಿದ್ಧಾರೆ.
ಕಳ್ಳನ ಬರುವಿಕೆ ಗೊತ್ತಾಗಿದ್ದು ಹೇಗೆ?:
ಜಾಡರ ಓಣಿಯಲ್ಲಿಯ ಮನೆಯ ಮುಂದೆ ಅಳವಡಿಸಿದ್ದ ಸಿ.ಸಿ.ಕ್ಯಾಮರಾ ದೃಶ್ಯದಲ್ಲಿ ಕಳೆದ 15 ದಿನಗಳಿಂದ ಕಳ್ಳರು ಬಂದು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಮನೆಯ ಮುಂದೆ ನಿಲ್ಲಿಸಿದ್ದ ಸೈಕಲ್ ಕದ್ದಿದ್ದಾರೆ. ಅದರ ಕೀ ತೆಗೆಯಲು ಬರದ ಕಾರಣ ಸೈಕಲ್ ಹೊತ್ತುಕೊಂಡು ಹೋಗಿದ್ದರು.
ಇನ್ನೊಂದು ಮನೆಯ ಕಿಟಕಿಯಿಂದ ಒಳ ಚಿಲಕ ತೆಗೆದು ದಿಂಬಿನ ಕೆಳಗೆ ಇಟ್ಟಿದ್ದ ಮೂರು ಮೊಬೈಲ್ಗಳನ್ನು ಕದ್ದಿದ್ದರು. ಈ ಎಲ್ಲ ಕೃತ್ಯ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದರ ಆಧಾರದ ಮೇಲೆ ಓಣಿಯ ಯುವಕರು ರಾತ್ರಿ ಗಸ್ತು ತಿರುಗಿ ಒಬ್ಬ ಕಳ್ಳನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳ್ಳರು ದುಶ್ಚಟಗಳಿಗೆ ಹಣ ಇಲ್ಲದ ಕಾರಣ ಸಮೀಪದ ಬಡಾವಣೆಗಳಿಗೆ ತೆರಳಿ ಈ ರೀತಿಯ ಕೃತ್ಯದಲ್ಲಿ ಭಾಗಿಯಾಗುತ್ತಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ: ತುಮಕೂರು: 21ಕ್ಕೆ ಪ್ರೀತಿ-ಗೀತಿ ಯಾಕೆ ಎಂದಿದ್ದಕ್ಕೆ ಡೀಸೆಲ್ ಸುರಿದುಕೊಂಡು ಯುವಕ ಸಾವು