ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ಪಕ್ಕದ ಮನೆಯ ಮಹಿಳೆಯನ್ನು ಆಕೆಯ ಮಗಳ ಎದುರೇ ಪೆಟ್ರೋಲ್ ಸುರಿದು ಹತ್ಯೆ ಮಾಡಿದ ಪ್ರಕರಣದಲ್ಲಿ ಅಪರಾಧಿಗೆ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ. ಅಕ್ಬರ್ ಬಾಷಾ ಗಾಲೀಸಾಬ ಬಾಗವಾನ್ ಶಿಕ್ಷೆಗೆ ಒಳಗಾದ ವ್ಯಕ್ತಿ.
ಘಟನೆಯ ಹಿನ್ನೆಲೆ: ಜಿಲ್ಲೆಯ ಸಿಂದಗಿ ತಾಲೂಕಿನ ಕೊಕಟನೂರ ಗ್ರಾಮದ ನಿವಾಸಿಯಾಗಿದ್ದ ಅಪರಾಧಿ ಅಕ್ಬರ್ ಬಾಷಾ ಬಾಗವಾನ್ ಹಾಗೂ ಪಕ್ಕದ ಮನೆಯ ಮಹಿಳೆ ಶಮಶಾದ ಅಕ್ಬರ್ ಮಕಾನದಾರ ಎಂಬುವವರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಇದೇ ಸಿಟ್ಟು ಇಟ್ಟುಕೊಂಡು ಅಕ್ಬರ್ ಶಮಶಾದ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. 2018 ಜನವರಿ 27ರಂದು ಶಮಶಾದ ತನ್ನ ಮಗಳು ಕೌಸರ್ ಜತೆ ಮನೆಯಲ್ಲಿ ಕುಳಿತುಕೊಂಡಿದ್ದಾಗ ಏಕಾಏಕಿ ಆಗಮಿಸಿದ ಅಕ್ಬರ್ ಶಮಶಾದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ.
ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಶಮಶಾದ ಅವರನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಹಿಳೆ ಸಾವನ್ನಪ್ಪಿದ್ದರು. ಈ ಸಂಬಂಧ ಆರೋಪಿ ವಿರುದ್ಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿ ವಿರುದ್ಧ ಚಾರ್ಜ್ ಸೀಟ್ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 1ನೇ ಅಧಿಕ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸತೀಶ.ಎಲ್.ಪಿ ಆರೋಪಿ ತಪ್ಪಿತಸ್ಥನೆಂದು ತೀರ್ಪು ನೀಡಿ ಗಲ್ಲು ಶಿಕ್ಷೆಯ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಮೃತ ಮಹಿಳೆಯ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ 1ನೇ ಅಧಿಕ ಸಹಾಯಕ ಅಭಿಯೋಜಕಿ ವಿ.ಎಸ್. ಇಟಗಿ ವಾದ ಮಂಡಿಸಿದ್ದರು.
ಅಪರಾಧಿಗೆ ಜೀವಾವಧಿ ಶಿಕ್ಷೆ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮನ ಹೆಂಡತಿ ಹಾಗೂ ಮಗನನ್ನು ಹತ್ಯೆ ಮಾಡಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 5.85 ಲಕ್ಷ ದಂಡ ವಿಧಿಸಿ ಉತ್ತರ ಕನ್ನಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇತ್ತೀಚೆಗೆ ಆದೇಶ ನೀಡಿತ್ತು. ಅಂಕೋಲಾದ ಮಠಾಕೇರಿ ವಾರ್ಡ್ನ ಸುಬ್ರಾಯ್ ಪ್ರಭು ಶಿಕ್ಷೆಗೆ ಒಳಗಾದ ಅಪರಾಧಿ.
ಪ್ರಕರಣದ ವಿವರ: ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಸುಬ್ರಾಯ್ ತಮ್ಮ ಅಮಿತ್, ತಾಯಿ ರುಕ್ಮಿಣಿಬಾಯಿ ಹಾಗೂ ಚಿಕ್ಕಪ್ಪ ಪದ್ಮನಾಭ ಪ್ರಭುವಿನೊಂದಿಗೆ ಜಗಳ ಮಾಡಿಕೊಂಡಿದ್ದ. ಆಸ್ತಿ ಪಾಲು ಮಾಡದೇ ಇರಲು ತಮ್ಮನ ಹೆಂಡತಿ ಮೇಧಾ (ಕಾಮಾಕ್ಷಿ) ಕಾರಣ ಎಂದು ಭಾವಿಸಿ 2019ರ ಜು. 27ರಂದು ಬಂದೂಕು ಹಿಡಿದು ಆಕೆಯ ಮನೆಗೆ ಅಕ್ರಮವಾಗಿ ಪ್ರವೇಶಿಸಿದ್ದ. ಮನೆಯಲ್ಲಿ ಮೇಧಾ ತನ್ನ ಮಗ ಅನೂಜನಿಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದಾಗ ಬಂದೂಕಿನಿಂದ ಗುಂಡು ಹಾರಿಸಿದ್ದ. ಆ ಗುಂಡು ಮಗನ ತಲೆಯನ್ನ ಸೀಳಿ ತಾಯಿಯ ತಲೆಯ ಭಾಗಕ್ಕೆ ಹೊಕ್ಕಿತ್ತು. ಅನೂಜ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮೇಧಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಳು. ಈ ಕುರಿತು ಭಾರತೀಯ ದಂಡ ಸಂಹಿತೆ ಕಲಂ 449, 450, 302 ಮತ್ತು ಕಲಂ 3 ಮತ್ತು 25 ಭಾರತೀಯ ಆಯುಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಪಿಎಸ್‌ಐ ಶ್ರೀಧರ್ ಎಸ್.ಆರ್, ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು
ಇದನ್ನೂ ಓದಿ: ಕಾರವಾರ: ತಮ್ಮನ ಹೆಂಡತಿ, ಮಗು ಹತ್ಯೆ.. ಅಪರಾಧಿಗೆ ಜೀವಾವಧಿ ಶಿಕ್ಷೆ