ವಿಜಯಪುರ: ಕೊರೊನಾ ವೈರಸ್ನಿಂದಾಗಿ ರಾಜ್ಯದ ಪ್ರವಾಸಿ ತಾಣಗಳು ಜನರಿಲ್ಲದೆ ಖಾಲಿ ಖಾಲಿಯಾಗಿವೆ. ವಿಜಯಪುರದ ಪ್ರಸಿದ್ಧ ಗೋಳಗುಮ್ಮಟ ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಜನರಿಲ್ಲದೆ ಆದಾಯಕ್ಕೂ ಕೊಕ್ಕೆ ಬಿದ್ದಿದೆ.
ಪ್ರವಾಸಿಗರಿಲ್ಲದೆ ಒಬ್ಬಂಟಿಯಾಗಿ ನಿಂತಿರುವ ಸ್ಮಾರಕಗಳ ದೃಶ್ಯ, ಪ್ರವಾಸೋದ್ಯಮ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದ ಪ್ರವಾಸಿ ಮಾರ್ಗದರ್ಶಕರು, ಟಾಂಗಾವಾಲ, ಹೋಟೆಲ್ ಉದ್ಯಮಗಳ ಸಂಕಷ್ಟ ಹೇಳತೀರದಾಗಿದೆ. ಇದೆಲ್ಲದಕ್ಕೂ ಕಾರಣ ಮಹಾಮಾರಿ ಕೊರೊನಾ ವೈರಸ್!
ರಾಜ್ಯದಲ್ಲಿ ಪ್ರಥಮ ಕೊರೊನಾ ಸೋಂಕು ಪಕ್ಕದ ಕಲಬುರಗಿ ಜಿಲ್ಲೆಯಲ್ಲಿ ಪತ್ತೆಯಾಗುತ್ತಿದ್ದಂತೆ ಮಾ. 13ರಂದು ಜಿಲ್ಲಾಡಳಿತವು ವಿಶ್ವ ವಿಖ್ಯಾತ ಗೋಳಗುಮ್ಮಟ, ಇಬ್ರಾಹಿಂ ರೋಜಾ ಸೇರಿದಂತೆ ಜಿಲ್ಲೆಯ ಪ್ರವಾಸಿ ಕೇಂದ್ರಗಳಿಗೆ ಪ್ರವಾಸಿರಗರ ಭೇಟಿಗೆ ನಿಷೇಧ ಹಾಕಿದ ಪರಿಣಾಮ ಇಂದು ಸ್ಮಾರಕಗಳ ನಗರ ಪ್ರವಾಸಿಗರಿಲ್ಲದೆ ಒಂಟಿಯಾಗಿವೆ. ಅಲ್ಲದೆ ಅವುಗಳ ನಂಬಿಕೊಂಡು ಒಂದೂತ್ತಿನ ಊಟ ಮಾಡುತ್ತಿದ್ದ ಗೈಡ್‌ಗಳು ಕಳೆದ ಎರಡೂವರೆ ತಿಂಗಳಿಂದ ಆರ್ಥಿಕ ಸಂಕಷ್ಟದ ಅನುಭವಿಸುತ್ತಿದ್ದಾರೆ. ಹಾಗಾಗಿ ಕಷ್ಟದಲ್ಲಿ ದಿನ ದೂಡುತ್ತಿರುವ ಗೈಡ್‌ಗಳು ಪ್ರವಾಸೋದ್ಯಮ ಆರಂಭವಾಗೋದನ್ನು ಎದುರು ನೋಡುತ್ತಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಗೋಳಗುಮ್ಮಟ, ಇಬ್ರಾಹಿಂ, ಆಲಮಟ್ಟಿ ಜಲಾಶಯ ಸೇರಿದಂತೆ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಪ್ರಾವಾಸಿ ತಾಣಗಳಿವೆ, ಸದ್ಯ ಕೊರೊನಾ ಭೀತಿಗೆ ಅವುಗಳು ಕೂಡ ನಷ್ಟದ ಹಾದಿಯಲ್ಲಿವೆ.
ಕಳೆದ ವರ್ಷ ಗೋಳಗುಮ್ಮಟ ಹಾಗೂ ಇಬ್ರಾಹಿಂ ರೋಜಾ ನೋಡುವುದಕ್ಕಾಗಿ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ 2.50 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. ಪ್ರತಿ ವರ್ಷವೂ 66 ಲಕ್ಷದಷ್ಟು ಆದಾಯ ಬರುತ್ತಿತ್ತು, ಆದರೆ, ಕೊರೊನಾದಿಂದಾಗಿ ಆದಾಯಕ್ಕೆ ಕೊಕ್ಕೆ ಬಿದ್ದಿದೆ.
ಪುರಾತತ್ವ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ದೇಶದ 71,007 ಜನರು ಹಾಗೂ 72 ಜನ ವಿದೇಶಿಗರು ಭೇಟಿ ನೀಡಿದಾಗ 10,55,637 ರೂ. ಆದಾಯ ಮತ್ತು ಮೇ ತಿಂಗಳಲ್ಲಿ 85,194 ರೂ. ದೇಶಿ ಪ್ರವಾಸಿಗರು ಹಾಗೂ 18 ವಿದೇಶಿ ಪ್ರವಾಸಿಗರು ಬಂದಾಗ 20,98,010 ರೂ, ಹಾಗೂ ವಿದೇಶಿಗರಿಂದ 68,400 ರೂ, ಏಪ್ರಿಲ್ ಜೊತೆಗೆ ಮೇ 1,32,760 ರೂ. ಆದಾಯ ಗೋಳಗುಮ್ಮಟ ಪ್ರವಾಸಿಗರಿಂದ ಬಂದಿದೆ.
ಇಬ್ರಾಹಿಂ ರೋಜಾ ಸ್ಮಾರಕ ವೀಕ್ಷಿಸಲು ಕಳೆದ ವರ್ಷ ಏಪ್ರಿಲ್‌ನಲ್ಲಿ ದೇಶಿ ಪ್ರವಾಸಿಗರು ಆಗಮಿಸಿದ್ದು, ಅವರಿಂದ 2,82,125 ರೂ. ಹಾಗೂ ವಿದೇಶಿಗರಿಂದ 9,300 ರೂ. ಹಾಗೂ ಮೇ ತಿಂಗಳಲ್ಲಿ 2,50,930 ರೂ. ದೇಶಿ ಪ್ರವಾಸಿಗರಿಂದ ಹಾಗೂ ವಿದೇಶಿಗರಿಂದ 4,350 ರೂ. ಆದಾಯ ಪುರಾತತ್ವ ಇಲಾಖೆಗೆ ಬಂದಿದೆ.
ಆದರೆ, ಇದೀಗ ಕೊರೊನಾ ಭೀತಿಗೆ ಪ್ರವಾಸೋದ್ಯಮವು ಕೂಡ ತತ್ತರಿಸಿ ಸರ್ಕಾರದ ಆದಾಯಕ್ಕೆ ಕತ್ತರಿ ಬಿದ್ದಿದೆ. ಇನ್ನು ಮಾ. 13ರಂದು ಪ್ರವಾಸೋದ್ಯಮ ಬಂದ್ ಮಾಡಿದ ಕಾರಣ ಆದಾಯ ಕೂಡ ಬಂದ್ ಆಗಿದೆ. ಸರ್ಕಾರ ಆದೇಶ ಬಂದ ತಕ್ಷಣ ಪ್ರವಾಸಿ ತಾಣ ನೋಡಲು ಜನರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಕೋವಿಡ್-19 ವೈಸರ್ ಭೀತಿಯಿಂದ ಜಿಲ್ಲೆಯ ಸ್ಮಾರಕಗಳು ಬಂದ್ ಆಗಿದೆ. ಪ್ರವಾಸಿ ತಾಣಗಳನ್ನು ನಂಬಿಕೊಂಡು ಬದುಕುಕಟ್ಟಿಕೊಂಡವರು ಇಂದು ಸಂಕಷ್ಟದಲ್ಲಿದ್ದಾರೆ. ಅಲ್ಲದೆ ಜಿಲ್ಲೆಯ ಪ್ರವಾಸೋದ್ಯಮದಿಂದ ಬರುವ ಆದಾಯ ಕೂಡ ಕಡಿತವಾಗಿದೆ.