ವಿಜಯಪುರ: ಕೇಂದ್ರ ಸರ್ಕಾರದ ಬಜೆಟ್ ಭಾರತದ ಸರ್ವತೋಮುಖ ಅಭಿವೃದ್ಧಿಯ ಬಜೆಟ್ ಆಗಿದೆ ಎಂದು ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಕುಚಬಾಳ ಹೇಳಿದರು.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷವಾಗಿ ಕೃಷಿಗೆ ಹೆಚ್ಚಿನ ಆಸಕ್ತಿ ನೀಡಲಾಗಿದ್ದು, ಶಿಕ್ಷಣ ಕ್ಷೇತ್ರಕ್ಕೆ ಅನುದಾನ, ಎಸ್ ಸಿ, ಎಸ್ ಟಿ, ಹಿಂದುಳಿದ ವರ್ಗಗಳಿಗೆ 80 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದು, ಎಲ್ಲಾ ರೀತಿಯಲ್ಲೂ ಹಣಕಾಸಿನ ವ್ಯವಸ್ಥೆ ಒದಗಿಸಿಸಲಾಗಿದೆ. ಇಂತಹ ಬಜೆಟ್ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ರೈತರಿಗಾಗಿ ಹಲವಾರು ಯೊಜನೆಗಳನ್ನು ಈ ಬಜೆಟ್ನಲ್ಲಿ ಒದಗಿಸಲಾಗಿದೆ. ಸಾರಿಗೆ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ, ಸ್ಮಾರ್ಟ್ ಸಿಟಿಯ ಚಿಂತನೆ, ಸ್ವಚ್ಚ ಭಾರತ ಯೋಜನೆಯಡಿ ಹಣ ಒದಗಿಸಿರುವದು ಹೀಗೆ ಹಲವಾರು ಯೋಜನೆಗಳನ್ನು ಇಟ್ಟುಕೊಂಡು ಸುಭದ್ರ ಭಾರತ ನಿರ್ಮಾಣದ ಕನಸನ್ನು ಹೊತ್ತ ಬಜೆಟ್ ಮಂಡನೆ ಮಾಡಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಾವು ಕೂಡಾ ಪಕ್ಷವನ್ನು ಗಟ್ಟಿಗೊಳಿಸುವ ಎಲ್ಲ ಪ್ರಯತ್ನ ಮಾಡುತ್ತೇವೆ. ಜಿಲ್ಲಾ ಬಿಜೆಪಿಯಲ್ಲಿರುವ ಸಮಸ್ಯೆ ಗಳನ್ನು ಬಗೆ ಹರಿಸಲು ಪ್ರಯತ್ನಿಸುತ್ತೇವೆ ಎಂದರು.
ಜೊತೆಗೆ ಜಿಲ್ಲೆಗೆ ಸಚಿವ ಸ್ಥಾನ ಸಿಗಬಹುದೆಂಬ ನಂಬಿಕೆ ಇದೆ. ಅದನ್ನು ನಾವು ಹಿರಿಯರ ಗಮನಕ್ಕೂ ತಂದಿದ್ದೇವೆ. ನಾವೆಲ್ಲರೂ ಸೇರಿ ಹಿರಿಯರ ಹತ್ತಿರ ನಮ್ಮ ಭಾವನೆ ಹಂಚಿಕೊಂಡಿದ್ದೇವೆ. ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ ಕೆಲ ಅನಿವಾರ್ಯ ಕಾರಣಗಳಿಂದ, ಕೆಲಸದ ಒತ್ತಡದಿಂದ ರದ್ದಾಗಿರಬಹುದು. ಸರಿಯಾದ ಹಾಗೂ ಸೂಕ್ತ ಸಮಯದಲ್ಲಿ ಜಿಲ್ಲೆಯ ಪ್ರವಾಸ ಕೈಗೊಳ್ಳುತ್ತಾರೆ ಎಂದರು.