ವಿಜಯಪುರ: ಮಹಾನಗರ ಪಾಲಿಕೆ ಸದಸ್ಯೆ ನಿಶಾತ್ ಪತಿ ಹಾಗೂ ರೌಡಿಶೀಟರ್ ಹೈದರ್ ಅಲಿ ನದಾಫ್ ಹತ್ಯೆಗೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶೇಖಅಹಮ್ಮದ್ ಮೋದಿ, ಸೈಯದ್ ಖಾದ್ರಿ, ಶಾನ್‌ವಾಜ್ ದಫೇದಾರ್, ಫಯಾಜ್ ಮುರ್ಶದ್, ಮೈಬೂಬ್ ಮಿರಜಕರ್ ಎಂದು ಗುರುತಿಸಲಾಗಿದೆ. ಹತ್ಯೆಗೈದ 5 ಜನ ಆರೋಪಿಗಳು ಮೇ 6ರಿಂದ ಪರಾರಿಯಾಗಿದ್ದರು.
ಬಂಧಿತ ಆರೋಪಿಗಳು ಮೇ 6ರಂದು ಚಾಂದಪುರ ಕಾಲೋನಿಯಲ್ಲಿ ಕಾರು ಹಾಗೂ ಬೈಕ್‌ನಲ್ಲಿ ಬಂದು ರೌಡಿಶೀಟರ್ ಹೈದರ್ ಅಲಿ ನದಾಫ್ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಅಡ್ಡಗಟ್ಟಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಹತ್ಯೆಗೆ ಮುಖ್ಯ ಕಾರಣವಾಗಿದ್ದು ಮಹಾನಗರ ಪಾಲಿಕೆ ಚುನಾವಣೆ, ಹತ್ಯೆಯಾದ ಹೈದರ್ ಅಲಿ ನದಾಫ್ ತನ್ನ ಪತ್ನಿ ನಿಶಾತ್‌ರನ್ನು ವಾರ್ಡ್ 19ರಲ್ಲಿ ಪಕ್ಷೇತರ ನಿಲ್ಲಿಸಿದ್ದರು. ಪತ್ನಿ ನಿಶಾತ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಇದರಿಂದ ಹತಾಶೆಗೊಂಡು ವಿರೋಧಿಗಳು ಹೈದರ ಅಲಿಯನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಸಂಬಂಧ ಹಲವರನ್ನು ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಬಂಧಿತ ಆರೋಪಿಗಳು ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಪ್ರಕರಣವನ್ನು ಭೇದಿಸಿದ ಪೊಲೀಸರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ ಅವರು ಬಹುಮಾನ ಘೋಷಿಸಿದ್ದಾರೆ.
ಚುನಾವಣೆ ದ್ವೇಷಕ್ಕಾಗಿ ಹತ್ಯೆ: ಮಹಾನಗರ ಪಾಲಿಕೆಯ ಪಕ್ಷೇತರ ಸದಸ್ಯೆಯ ಪತಿ ಹಾಗೂ ರೌಡಿಶೀಟರ್ ಹೈದರ್ ಅಲಿ ನದಾಪ್ರನ್ನು ದುಷ್ಕರ್ಮಿಗಳು ಮೇ 6ರಂದು ಹಾಡಹಗಲೇ ನಗರದ ಚಂದಾಪುರ ಕಾಲೋನಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಗುಂಡಿನ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ರೌಡಿ ಶೀಟರ್ ಹೈದರ್ ನದಾಪ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಹತ್ಯೆ ನಡೆದ ದಿನ ವಿಜಯಪುರ ಎಸ್ಪಿ ಎಚ್ ಡಿ ಆನಂದಕುಮಾರ ಮಾತನಾಡಿ, ಕಳೆದ ಬಾರಿ ನಡೆದ ಮಹಾನಗರ ಪಾಲಿಕೆ ಚುನಾವಣೆ ದ್ವೇಷದ ಹಿನ್ನೆಲೆ ವಿಜಯಪುರ ಮಹಾನಗರ ಪಾಲಿಕೆ ಸದಸ್ಯೆ ನಿಶಾತ್ ಅವರ ಪತಿ ರೌಡಿಶೀಟರ್ ಹೈದರ್ ಅಲಿ ನದಾಫ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದರು.
4ಕ್ಕಿಂತ ಹೆಚ್ಚು ಬಾರಿ ಹೈದರ್ ಅಲಿ ನದಾಫ್‌ನ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಅಲ್ಲದೇ, ದುಷ್ಕರ್ಮಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ. ಲೈಸೆನ್ಸ್ ಗನ್ ಮೂಲಕ ಹತ್ಯೆ ಮಾಡಿಲ್ಲ. ಹತ್ಯೆಯಲ್ಲಿ ಕಂಟ್ರಿಮೇಡ್ ಪಿಸ್ತೂಲು ಉಪಯೋಗವಾಗಿರಬೇಕು ಎಂದಿದ್ದಾರೆ. ಈ ಹತ್ಯೆ ಮಹಾನಗರ ಪಾಲಿಕೆಯ ಚುನಾವಣೆ ದ್ವೇಷಕ್ಕಾಗಿ ಹತ್ಯೆ ಮಾಡಲಾಗಿದೆ. ಆದಷ್ಟು ಬೇಗನೆ ದುಷ್ಕರ್ಮಿಗಳನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದರು.
ಇದನ್ನು ಓದಿ:ಬೀಗ ಹಾಕಿದ್ದ ಮನೆಯಲ್ಲಿ ವಿಧವೆ, ಇಬ್ಬರು ಮಕ್ಕಳ ಮೃತದೇಹಗಳು ಪತ್ತೆ