ವಿಜಯಪುರ: ದೇಶದಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯವಾಗಿ ಹೇರಲಾಗುತ್ತಿದೆ ಎನ್ನುವ ಕೂಗು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಆಯಾ ರಾಜ್ಯಗಳು ನಮ್ಮ ಮಾತೃ ಭಾಷೆ ನಮಗೆ ಶೇಷ್ಠ ಎನ್ನುವಾಗ, ಇಲ್ಲೊಂದು ವ್ಯಾಪಾರಿ ಕುಟುಂಬ ಪುರಾತನ ಭಾಷೆಯಾಗಿರುವ ಸಂಸ್ಕೃತವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದರಲ್ಲಿಯೇ ವ್ಯವಹಾರ ನಡೆಸುತ್ತಿದ್ದಾರೆ.
ವಿಜಯಪುರ ನಗರದ ಮೀನಾಕ್ಷಿ ಚೌಕ್‌ನಲ್ಲಿರುವ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ತಮ್ಮ ಸಹೋದ್ಯೋಗಿ ಹಾಗೂ ಮಾಲೀಕರೊಂದಿಗೆ ಸಂಸ್ಕೃತ ಭಾಷೆಯಲ್ಲಿಯೇ ವ್ಯವಹರಿಸುತ್ತಾರೆ. ಗ್ರಾಹಕರು ಇಚ್ಛೆಪಟ್ಟಲ್ಲಿ ಅವರೊಂದಿಗೂ ಸಹ ಇದೇ ಭಾಷೆಯನ್ನೇ ಬಳಸುವ ಮೂಲಕ ಭಾಷೆ ಬೆಳೆಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಬಟ್ಟೆ ಅಂಗಡಿ ಮಾಲೀಕ ರಾಮಸಿಂಗ್ ರಜಪೂತ ರಾಜಸ್ಥಾನದವರು. ಬಟ್ಟೆ ವ್ಯಾಪಾರ ಮಾಡುತ್ತಾ ತಮ್ಮ ಎರಡ್ಮೂರು ತಲೆಮಾರುಗಳ ಹಿಂದೆ ವಿಜಯಪುರ ನಗರಕ್ಕೆ ಬಂದು ನೆಲೆಸಿದ್ದಾರೆ. ಸುಮಾರು ವರ್ಷಗಳಿಂದ ಸಣ್ಣ ಬಟ್ಟೆ ವ್ಯಾಪಾರ ಮಾಡುತ್ತಿದ್ದು ಸದ್ಯ ಇವರ ವ್ಯಾಪಾರ ವಹಿವಾಟು ದೊಡ್ಡದಾಗಿ ಬೆಳೆದಿದೆ. ಇವರ ಬಟ್ಟೆ ಅಂಗಡಿಯಲ್ಲಿ ಸುಮಾರು 70ಕ್ಕೂ ಹೆಚ್ಚು ಜನ ಕಾರ್ಮಿಕರು ಕೆಲಸ ಮಾಡುತ್ತಾರೆ. ಈ ಪೈಕಿ ಮುಸ್ಲಿಂ ಯುವಕ, ಯುವತಿಯರೇ ಹೆಚ್ಚಿದ್ದಾರೆ ಎನ್ನುವುದು ವಿಶೇಷ.
ಸಂಸ್ಕೃತ ಭಾಷೆ ಇವರ ಉಸಿರು: ಈ ಅಂಗಡಿಯಲ್ಲಿ ಎಲ್ಲರೂ ವ್ಯವಹರಿಸುವ ಭಾಷೆ ಸಂಸ್ಕೃತ. ಅಂಗಡಿಯ ಮಾಲೀಕ ಸಂಸ್ಕೃತದಲ್ಲಿ ಮಾತನಾಡುತ್ತಿರುವುದಕ್ಕೆ ಒಂದು ನಿದರ್ಶನವೂ ಇದೆ. 18 ವರ್ಷಗಳ ಹಿಂದೆ ಮಕ್ಕಳು ಮತ್ತು ಪತ್ನಿಯೊಡನೆ ಜ್ಞಾನ ಯೋಗಾಶ್ರಮ, ಸಿದ್ಧೇಶ್ವರ ಮಠಕ್ಕೆ ಹೋಗಿದ್ದಾಗ ಅಲ್ಲಿ ಸಂಸ್ಕೃತದಲ್ಲಿಯೇ ಪ್ರವಚನ ನಡೆಯುತ್ತಿರುತ್ತದೆ. ದೇವರಿಗೆ ನಮಸ್ಕರಿಸಿ ವಾಪಸ್ ತೆರಳುವಾಗ ಶ್ರೀಗಳು ತಮ್ಮ ಪ್ರವಚನ ಕೇಳುವಂತೆ ಸಲಹೆ ನೀಡುತ್ತಾರೆ. ಇವರು ಪ್ರವಚನಕ್ಕೆ ಕುಳಿತಾಗ ಸಂಸ್ಕೃತ ಭಾಷೆಗೆ ಎಷ್ಟು ಮಹತ್ವವಿದೆ ಎಂದು ಅರ್ಥವಾಗುತ್ತದೆ. ಹೀಗಾಗಿ ಇವರು ತಮ್ಮ ಮಾತೃ ಭಾಷೆಯನ್ನೇ ಬಿಟ್ಟು ಅಂದಿನಿಂದ ಇಂದಿನವರೆಗೂ ಸಂಸ್ಕೃತ ಭಾಷೆಯೇ ಇವರ ಉಸಿರಾಗಿದೆ.
ಉಚಿತವಾಗಿ ತರಬೇತಿ: ಸಂಸ್ಕೃತ ಭಾಷೆಯಲ್ಲಿಯೇ ವ್ಯವಹರಿಸುತ್ತಿರುವ ಇವರು ಭಾಷಾ ಪ್ರಸಾರಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಈವರೆಗೆ ಸರಿಸುಮಾರು 10 ರಿಂದ 15 ಸಾವಿರ ಜನರಿಗೆ ಸಂಸ್ಕೃತ ಕಲಿಸಿದ್ದಾರೆ. ಯಾರಾದರೂ ಹೊಸದಾಗಿ ಇವರ ಬಟ್ಟೆ ಅಂಗಡಿಗೆ ಕೆಲಸಕ್ಕೆ ಬಂದರೆ ಮೊದಲ ದಿನದಿಂದಲೇ 10 ದಿನಗಳ ಕಾಲ ಸಂಸ್ಕೃತದ ಕುರಿತು ರಾಮಸಿಂಗ್ ಅವರು ಉಚಿತವಾಗಿ ತರಬೇತಿ ನೀಡುತ್ತಾರೆ. ಅತಿ ಸರಳವಾಗಿ ಸಂಸ್ಕೃತವನ್ನು ಇವರು ಕಲಿಸಿ ಕೊಡುತ್ತಾರೆ.
ದೇಶಿದ ಪುರಾತನ ಭಾಷೆಯಾಗಿರುವ ಸಂಸ್ಕೃತವನ್ನು ಇವರು 'ಸಂಸ್ಕೃತ ಭಾರತ' ಎಂಬ ಸಂಘಟನೆಯಲ್ಲಿ ತೊಡಗಿಕೊಂಡು ಸಂಸ್ಕೃತ ಕಲಿಯಬೇಕೆಂಬ ಆಸಕ್ತರಿರುವಲ್ಲಿಗೆ ತೆರಳಿ 10 ದಿನಗಳ ಕಾಲ ಉಚಿತ ಸಂಸ್ಕೃತ ಹೇಳಿಕೊಡುತ್ತಾರೆ. ಮಹಾರಾಷ್ಟ್ರದ ಗಡಿ ಗ್ರಾಮ ಬಬಲಾದ ಗ್ರಾಮದ ಯುವಕರಿಗೆ ಸಂಸ್ಕೃತ ಹೇಳಿಕೊಟ್ಟ ಹಿರಿಮೆ ಇವರದ್ದು.
"ವಿದೇಶದಲ್ಲಿಯೂ ಸಂಸ್ಕೃತ ಹೇಳಿಕೊಡುವಂತೆ ಭಾರತೀಯರಿಂದ ನನಗೆ ಒತ್ತಾಯವಿದೆ. ನಮ್ಮ ದೇಶದ ಜನರು ಬೇರೆ ಬೇರೆ ದೇಶಗಳಿಗೆ ವಲಸೆ ಹೋಗಿದ್ದಾರೆ. ಜರ್ಮನಿ, ಅಮೆರಿಕ, ಸಿಂಗಾಪುರ್ ಹೀಗೆ ಭಾರತೀಯರು ಸಂಸ್ಕೃತ ಕಲಿಯುವ ಆಸಕ್ತಿ ಹೊಂದಿದ್ದಾರೆ. ಆದರೆ ಬೇರೆ ದೇಶದ ಕಾಲಮಾನ ನಮಗೆ ಹೊಂದಾಣಿಕೆಯಾಗುತ್ತಿಲ್ಲ. ಹೀಗಾಗಿ ಈ ಬಗ್ಗೆ ಇನ್ನೂ ವಿಚಾರ ಮಾಡಲಾಗುತ್ತಿದೆ" ಎಂದು ರಾಮಸಿಂಗ್ ಅವರ ಪುತ್ರ ರಾಹುಲ್ ಸಿಂಗ್ ಹೇಳಿದರು.
ನೀವು ಸಂಸ್ಕೃತ ಭಾಷೆ ಕಲಿಯಬೇಕೆನ್ನುವ ಆಸಕ್ತಿ ಹೊಂದಿದ್ದರೆ ರಾಮಸಿಂಗ್ ರಜಪೂತ ಅವರ ಮೊಬೈಲ್ ಸಂಖ್ಯೆ 9449768120 ಸಂಪರ್ಕಿಸಬಹುದು.
ಇದನ್ನೂ ಓದಿ: ಶಾಸ್ತ್ರಗಳ ಅಧ್ಯಯನಕ್ಕಾಗಿ ಸಂಸ್ಕೃತ ವಿಶ್ವವಿದ್ಯಾಲಯದಿಂದ 'ರನ್ ಫಾರ್ ಸಂಸ್ಕೃತ್'