ವಿಜಯಪುರ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರ ಅಧಿಕಾರ ಅವಧಿಯಲ್ಲಿ ಆಶ್ರಯ ಯೋಜನೆ ಮನೆಗಳಲ್ಲಿ ಅವ್ಯವಹಾರ ಆಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಆರೋಪಿಸಿದ್ದಾರೆ.
ಆಲಮಟ್ಟಿಯಲ್ಲಿ ಮಾತನಾಡಿದ ಅವರು, ಸಿದ್ರಾಮಯ್ಯ ಹಾಗೂ ಕುಮಾರಸ್ವಾಮಿ ಅಧಿಕಾರದಲ್ಲಿ 14 ಲಕ್ಷ ಆಶ್ರಯ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಲೆಕ್ಕಪತ್ರದಲ್ಲಿ ತೋರಿಸಲಾಗಿದೆ. ಆದ್ರೆ ಇವೆಲ್ಲ ಕೇವಲ ಕಾಗದದಲ್ಲಿವೆ. ಅವ್ಯವಹಾರ ಆಗಿದೆ ಎಂದು ಸಾಕಷ್ಟು ದೂರುಗಳು ಬಂದಿವೆ ಎಂದರು. ಅರ್ಹ ಫಲಾನುಭವಿಗಳಿಗೆ ಮನೆಗಳು ಸಿಕ್ಕಿಲ್ಲ. ಎಲ್ಲವೂ ತಮಗೆ ಬೇಕಬೇಕಾದವರಿಗೆ, ಬೆಂಬಲಿಗರಿಗೆ, ಹಣ ಕೊಟ್ಟವರಿಗೆ ಕೊಡಲಾಗಿದೆ. ಈ ರೀತಿ ದೂರುಗಳು ಬಂದ ಹಿನ್ನೆಲೆ ಎಲ್ಲವನ್ನು ತನಿಖೆಗೆ ಆದೇಶಿಸಿದ್ದೇನೆ ಎಂದರು. ಇನ್ನು ನಾಲ್ಕು ದಿನಗಳಲ್ಲಿ ತನಿಖೆ ಆರಂಭವಾಗಲಿದೆ ಎಂದು ತಿಳಿಸಿದರು.
ನೆರೆ ಸಂತ್ರಸ್ತರ ಪರಿಹಾರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನೆರೆ ಸಂತ್ರಸ್ತರಿಗೆ ಬಿಎಸ್ವೈ ನೀಡಿದಷ್ಟು ಪರಿಹಾರ ಯಾರೂ ನೀಡಿಲ್ಲ. ಎಲ್ಲಾ ರಾಜ್ಯಗಳಲ್ಲೂ ಪ್ರವಾಹ ಬಂದಾಗ ಬಿದ್ದ ಮನೆಗಳಿಗೆ ಕೇವಲ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಆದರೆ ಯಡಿಯೂರಪ್ಪ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಈಗಾಗಲೇ ಒಂದು ಲಕ್ಷದವರೆಗೆ ಪರಿಹಾರ ಮುಟ್ಟಿದೆ. ಹಣಕಾಸಿನ ಲೆಕ್ಕಾಚಾರ ನೋಡಿ ಹಂತ ಹಂತವಾಗಿ ನಿರಾಶ್ರಿತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.