ಮುದ್ದೇಬಿಹಾಳ (ವಿಜಯಪುರ): ನಾಲ್ಕು ದಿನಗಳ ಹಿಂದಷ್ಟೇ ಪಟ್ಟಣದ ಹಳೇ ಕೋರ್ಟ್ ಮುಂಭಾಗದಲ್ಲಿ ಹೊಸದಾಗಿ ಆರಂಭಗೊಂಡಿದ್ದ ಇಲ್ಲೂರ ಜ್ಯುವೆಲರಿ ಅಂಗಡಿಯಲ್ಲಿ ಶುಕ್ರವಾರ ಬೆಳಗಿನ ಜಾವ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ.
ಕಳ್ಳತನಕ್ಕೆ ಹೊಂಚು ಹಾಕಿದ್ದ ಕಳ್ಳರು, ಮಧ್ಯರಾತ್ರಿ ಇಲ್ಲೂರ ಜ್ಯುವೆಲರಿ ಬಳಿ ಬಂದು ಗಸ್ತು ತಿರುಗುತ್ತಿದ್ದ ಗೂರ್ಖಾನನ್ನು ಮಾತನಾಡಿಸಿ, ಗಾಂಜಾ ಸೇವನೆ ಮಾಡುತ್ತೀಯಾ ಎಂದು ಆಮಿಷವೊಡ್ಡಿದ್ದಾರೆ. ಗೂರ್ಖಾ ಅವರ ಆಮಿಷ ನಿರಾಕರಿಸಿ ಗಸ್ತು ಮುಂದುವರೆಸಲೆಂದು ಮುಂದಾಗಿದ್ದಾರೆ. ಬಳಿಕ ಖದೀಮರು ಗ್ಯಾಸ್ ಕಟರ್ ಬಳಸಿ ಜ್ಯುವೆಲರಿಯ ಶಟರ್ ಗ್ರಿಲ್ ಮುರಿದು ಒಳ ನುಗ್ಗಿದ್ದಾರೆ. ಅಲ್ಲಿದ್ದ ಗೂರ್ಖ ಕೂಡಲೇ ಬೀಟ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ಪರಾರಿಯಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜ್ಯುವೆಲರಿ ಮಾಲೀಕ ಸುನೀಲ ಇಲ್ಲೂರ, ಚಿನ್ನಾಭರಣ ಲಾಕರ್‌ನಲ್ಲಿ ಇಟ್ಟಿದ್ದ ಹಿನ್ನೆಲೆ, ಯಾವುದೇ ಚಿನ್ನಾಭರಣ ಕಳುವಾಗಿಲ್ಲ. ಈ ಘಟನೆ ಗೂರ್ಖಾನಿಂದ ಬೆಳಕಿಗೆ ಬಂದಿದೆ. ಪೊಲೀಸರು ಸಕಾಲದಲ್ಲಿ ಆಗಮಿಸಿ ಕಳ್ಳತನ ಆಗದಂತೆ ತಡೆದಿದ್ದಾರೆ. ಆದರೆ ಮೇಲಿಂದ ಮೇಲೆ ಈ ರೀತಿಯ ಘಟನೆಗಳು ಸಂಭವಿಸುತ್ತಿರುವುದು ಆತಂಕ, ಭಯವನ್ನುಂಟು ಮಾಡಿದೆ ಎಂದರು.
ಗೂರ್ಖಾ ಶೇರ್ ಬಹಾದ್ದೂರ ಮಾತನಾಡಿ, ಮಧ್ಯರಾತ್ರಿ ಬೈಕ್ ಹಾಗೂ ಕಾರಿನಲ್ಲಿ ಬಂದಿದ್ದ ಕಳ್ಳರ ತಂಡ, ನನಗೆ ಗಾಂಜಾ ಸೇವನೆ ಮಾಡಲು ಕೇಳಿದರು. ನಾನು ನಿರಾಕರಿಸಿದೆ. ನೀವೇಕೆ ಇಲ್ಲಿ ಕೂತಿದ್ದೀರಿ ಎಂದು ಪ್ರಶ್ನೆ ಮಾಡಿದೆ. ಅದಕ್ಕೆ ಅವರು ಗಾಂಜಾ ಸೇವನೆಗೆ ಕೂತಿದ್ದೇವೆ ಎಂದರು. ಕೆಲ ಹೊತ್ತಿನ ಬಳಿಕ ಅಂಗಡಿಯೊಳಗೆ ಕಳುವು ಮಾಡಲು ಹೊಂಚು ಹಾಕುತ್ತಿದ್ದನ್ನು ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದೆ ಎಂದರು.