ವಿಜಯಪುರ : ಬೈಕ್ ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ಎಚ್ ಎಚ್ ಸಂಗಾಪೂರ ಕ್ರಾಸ್ ಬಳಿ ಇಂದು ನಡೆದಿದೆ. ಮೃತರು ಬಾಗಲಕೋಟೆಯ ಮಹಾಲಿಂಗಪೂರದವರು ಎಂದು ಹೇಳಲಾಗಿದೆ.
ವೇಗವಾಗಿ ಬಂದ ಬೈಕ್ ಬಬಲೇಶ್ವರ ತಾಲೂಕಿನ ಎಚ್ ಎಚ್ ಸಂಗಾಪೂರ ಕ್ರಾಸ್ ಬಳಿ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಬಬಲೇಶ್ವರ ಪೊಲೀಸ್ ಠಾಣೆಯ ಪಿಎಸ್ಐ ಅಶೋಕ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದಾಗಿ ಸ್ಥಳದಲ್ಲಿ ಕೆಲ ಕಾಲ ಸಂಚಾರ ವ್ಯತ್ಯಯವಾಗಿತ್ತು. ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.
ವಿಜಯಪುರದಲ್ಲಿ ಕಾರು ಚಾಲಕನಿಂದ ಸರಣಿ ಅಪಘಾತ : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಆಟೋ ಹಾಗೂ ಗೂಡ್ಸ್ ವಾಹನಕ್ಕೆ ಡಿಕ್ಕಿಯಾಗಿರುವ ಘಟನೆ ವಿಜಯಪುರ ನಗರದ ಜಿಲ್ಲಾಸ್ಪತ್ರೆಯ ರಸ್ತೆಯಲ್ಲಿ ಬುಧವಾರ ನಡೆದಿದೆ. ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಬಳಿಕ ಪರಾರಿಯಾಗಲು ಯತ್ನಿಸಿದ ಕಾರು ಚಾಲಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಿಎಂಟಿಸಿ ಬಸ್ ಹರಿದು ಮಹಿಳೆ ಸಾವು : ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬುಧವಾರ ಸಂಜೆ ಇಲ್ಲಿನ ಸಿಲ್ಕ್ ಬೋರ್ಡ್ ಜಂಕ್ಷನ್ ಸಮೀಪದ ಮಡಿವಾಳ ಮೇಲ್ಸೇತುವೆ ಮೇಲೆ ಅಪಘಾತದ ನಡೆದಿದ್ದು, ಬಸ್ ಚಕ್ರ ಹರಿದ ಪರಿಣಾಮ ಸೀಮಾ (21) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಒಂದೂವರೆ ವರ್ಷದ ಹೆಣ್ಣು ಮಗು ಮತ್ತು ಪತಿ ಗುರುಮೂರ್ತಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಬೈಕ್ಗೆ ಲಾರಿ ಡಿಕ್ಕಿ, ಇಬ್ಬರು ಸಾವು : ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬಳಿಕ ಕುರಿ ಮೇಯಿಸುತ್ತಿದ್ದ ಮಹಿಳೆಯ ಮೇಲೆ ಹರಿದ ಪರಿಣಾಮ ವಾಹನ ಸವಾರ ಮತ್ತು ಕುರಿಗಾಹಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ಬುಧವಾರ ನಡೆದಿತ್ತು. ಜಿಲ್ಲೆಯ ಗುಡಿಬಂಡೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ಚಿಮುಕುಲಹಳ್ಳಿ ತಾಂಡಾದ ಮಹಿಳೆ ತುಳಸಿಭಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ದ್ವಿಚಕ್ರ ವಾಹನ ಸವಾರ ನಂದೀಶ್ ನಾಯಕ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.
ಇದನ್ನೂ ಓದಿ : ತನ್ನೊಂದಿಗೆ ಲಿವಿಂಗ್ ಟು ಗೆದರ್ನಲ್ಲಿದ್ದ ಗೆಳತಿ ಹತ್ಯೆ ಮಾಡಿದ ವ್ಯಕ್ತಿಯ ಬಂಧನ