ವಿಜಯಪುರ: ಜಿಲ್ಲೆಯ ಇಂಡಿ ಪಟ್ಟಣದ ಶಾಂತೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಪ್ರಶ್ನೆ ಪತ್ರಿಕೆ ನಕಲು ಆರೋಪದ ಮೇಲೆ ಇಬ್ಬರನ್ನ ಬಂಧಿಸಲಾಗಿದ್ದು, 7 ಜನ ವಿದ್ಯಾರ್ಥಿಗಳನ್ನ ಡಿಬಾರ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಇಂಡಿ ಪಟ್ಟಣದ ಶಾಂತೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ಭೌತಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ. ಪರೀಕ್ಷೆ ಆರಂಭವಾದ ಒಂದು ಗಂಟೆ ನಂತರ ಪ್ರಶ್ನೆಪತ್ರಿಕೆ ಫೋಟೋ ತೆಗೆದು ನಕಲು ಮಾಡಲಾಗಿದೆ ಎಂಬ ಆರೋಪದ ಮೇಲೆ ಮುರುಗೇಂದ್ರ ಹಿರೇಮಠ ಎಂಬ ವಿದ್ಯಾರ್ಥಿ ಹಾಗೂ ಹೊರಗಿನಿಂದ ಬಂದ ಭಾಗಪ್ಪ ಸಗರ ಎಂಬುವವರನ್ನ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು, ಕರ್ತವ್ಯ ನಿರ್ಲಕ್ಷ್ಯ ಆರೋಪದ ಅಡಿಯಲ್ಲಿ ಪರೀಕ್ಷಾ ಕೇಂದ್ರದ ಮೇಲ್ವಿಚಾರಕಿ ಶ್ರೀಮತಿ ನಾರಾಯನಕರ್ ಅವರನ್ನು ಅಮಾನತು ಮಾಡಲು ಆದೇಶಿಸಲಾಗಿದ್ದು, 7 ಜನ ವಿದ್ಯಾರ್ಥಿಗಳನ್ನ ಡಿಬಾರ್ ಮಾಡಲಾಗಿದೆ. 13 ಜನ ವಿದ್ಯಾರ್ಥಿಗಳಿಗೆ ತಾಕೀತು ಮಾಡಿದ್ದೇವೆ. ಶಿಕ್ ಕಾಯ್ದೆ ಪ್ರಕಾರ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ. ಜಿಲ್ಲೆಯ 41 ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಗಳನ್ನು ಜಿಲ್ಲಾಡಳಿತ ಹಸ್ತಾಂತರ ಮಾಡಿದೆ. ಇಂದು ಇಂಡಿಯ ಶಾಂತೇಶ್ವರ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದ ಪರೀಕ್ಷೆಯಲ್ಲಿ ನಕಲಾಗಿದೆ ಹೊರತು ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ರು.