ವಿಜಯಪುರ: ಕಳೆದ ರಾತ್ರಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಪ್ರತ್ಯೇಕ ಪ್ರಕರಣದಲ್ಲಿ ಬಾಲಕ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ. ಭಾರಿ ಪ್ರಮಾಣದ ಗಾಳಿ ಬೀಸಿದ ಪರಿಣಾಮ ಮನೆಯ ತಗಡಿನ ಶೀಟ್ ಮೇಲಿನ ಕಲ್ಲು ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ವಿಜಯಪುರ ಹೊರ ವಲಯದ ಹೌಸಿಂಗ್ ಬೋರ್ಡ್ ಬಳಿಯ ತೋಟದ ಮನೆಯಲ್ಲಿ ನಡೆದಿದೆ. ಸಚಿನ್ ಮಹಾಂತೇಶ ಸೊನ್ನದ (14) ಮೃತ ಬಾಲಕ.
ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಈ ಅವಘಡ ಸಂಭವಿಸಿದೆ. ತೋಟದ ಮನೆಗೆ ತಗಡಿನ ಶೀಟ್ (ಪತ್ರಾಸ್) ಅಳವಡಿಸಿ ಮೇಲೆ ಕಲ್ಲು ಇಡಲಾಗಿತ್ತು. ಗಾಳಿ, ಮಳೆಗೆ ತಗಡಿನ ಶೀಟ್ಗಳು ಹಾರಿ ಹೋಗಿ, ಅದರ ಮೇಲೆ ಇಟ್ಟಿದ್ದ ಕಲ್ಲು ಬಾಲಕನ ಎದೆಯ ಮೇಲೆ ಬಿದ್ದು ದುರ್ಘಟನೆ ಸಂಭವಿಸಿದೆ ಎನ್ನಲಾಗ್ತಿದೆ. ವಿಜಯಪುರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸಿಡಿಲಿಗೆ ವ್ಯಕ್ತಿ ಬಲಿ: ಸಿಡಿಲು ಬಡಿದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ತೆಲಗಿ ಗ್ರಾಮದಲ್ಲಿ ನಡೆದಿದೆ. ಜಗದೀಶ್ ಹಣಮಂತ ಸತ್ತಿಗೇರಿ ಮೃತ ವ್ಯಕ್ತಿ. ತೋಟದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎನ್ನಲಾಗ್ತಿದೆ. ಸ್ಥಳಕ್ಕೆ ಕೂಡಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೂಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ವಿಜಯನಗರದಲ್ಲಿ ಭಾರಿ ಮಳೆ: ಸಿಡಿಲಿಗೆ ಬಾಲಕ ಬಲಿ, 17 ಕುರಿಗಳು ಸಾವು