ವಿಜಯಪುರ: ಕೃಷ್ಣಾ ನದಿಯಲ್ಲಿ ಮೀನು ಹಿಡಿಯಲು ಹೋಗಿ ಕಾಣೆಯಾಗಿದ್ದ ಸಹೋದರರಿಬ್ಬರು ಇಂದು ಶವವಾಗಿ ಕಂಡುಬಂದಿದ್ದಾರೆ. ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಬಳೂತಿ ಜಾಕ್ವೆಲ್ ಬಳಿ ಮೃತದೇಹಗಳು ದೊರೆತಿವೆ. ಬಳೂತಿ ಗ್ರಾಮದ ಬಸಪ್ಪ ಮಳೆಪ್ಪ ದಳವಾಯಿ (29) ಅಜೀತ್ ಮಳೆಪ್ಪ ದಳವಾಯಿ (25) ಮೃತರು.
ಮೊನ್ನೆ ಸಂಜೆ ಕೃಷ್ಣಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಇವರು ಭಾರಿ ಗಾಳಿ-ಮಳೆಯಿಂದಾಗಿ ತೆಪ್ಪ ಮಗುಚಿ ನೀರು ಪಾಲಾಗಿದ್ದರು. ಮಾಹಿತಿ ತಿಳಿದ ಬಳಿಕ ಬಳೂತಿ, ರೊಳ್ಳಿ ನದಿ ದಂಡೆಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ದರು. ಇಂದು ಇಬ್ಬರು ಸಹೋದರರ ಶವಗಳನ್ನು ಸಿಬ್ಬಂದಿ ಹೊರತಂದಿದ್ದಾರೆ.
ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನಿಂದಿಸಿದ ಯುವಕನಿಗೆ ಬುದ್ಧಿವಾದ ಹೇಳಿದೆ ಅಷ್ಟೇ: ಶಾಸಕ ವೆಂಕಟರಮಣಪ್ಪ ಸ್ಪಷ್ಟನೆ