ವಿಜಯಪುರ: ಟೋಲ್ ಗೇಟ್ ಬಳಿ ಸಿಕ್ಕಿಹಾಕಿಕೊಂಡ ಕಳ್ಳನೋರ್ವ ಟೋಲ್ ಸಿಬ್ಬಂದಿಯನ್ನು ಬೆದರಿಸಿ ಎಸ್ಕೇಪ್ ಆಗಿದ್ದಾನೆ. ಕಸಬಾ ಟೋಲ್ ಗೇಟ್ ಬಳಿ ಘಟನೆ ನಡೆದಿದೆ. ಕಳ್ಳನನ್ನು ಹಿಡಿಯಲು ಟೋಲ್ ಗೇಟ್ ಸಿಬ್ಬಂದಿ ಹರಸಾಹಸಪಟ್ಟರೂ ಆತ ಪಕ್ಕದ ಹೊಲದಲ್ಲಿ ಓಡಿ ಹೋಗಿ ತಪ್ಪಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ನಿಂದ ಸ್ಯಾಂಟ್ರೋ ಕಾರಿನಲ್ಲಿ ಹೊರಟಿದ್ದ ಕಳ್ಳನ ಬಗ್ಗೆ ಇಳಕಲ್ ಪೊಲೀಸರು ಟೋಲ್ ಗೇಟ್ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಅದರಂತೆ ಟೋಲ್ ಗೇಟ್ ಬಳಿ ಸಿಬ್ಬಂದಿ ಕಾರನ್ನು ತಡೆದಿದ್ದಾರೆ. ಈ ವೇಳೆ ಚಾಕು ಸಮೇತ ಕೆಳಗೆ ಇಳಿದ ಕಳ್ಳ ಟೋಲ್ ಗೇಟ್ ಸಿಬ್ಬಂದಿಯನ್ನು ಬೆದರಿಸಿದ್ದಾನೆ. ಮುಖಕ್ಕೆ ಮಾಸ್ಕ್ ಧರಿಸಿದ್ದ ಆರೋಪಿ ಚಾಕು ತೋರಿಸಿ ಕಾರನ್ನು ಅಲ್ಲಿಯೇ ಬಿಟ್ಟು ಪಕ್ಕದ ಹೊಲದಲ್ಲಿ ಓಡಿ ಹೋಗಿದ್ದಾನೆ. ಟೋಲ್ ಗೇಟ್ ಸಿಬ್ಬಂದಿ ಸಹ 4 ಕಿ.ಮೀ ವರೆಗೆ ಕಳ್ಳನನ್ನು ಬೆನ್ನಟ್ಟಿದರೂ ಸಹ ಆರೋಪಿಯನ್ನು ಹಿಡಿಯಲಿ ಸಾಧ್ಯವಾಗಿಲ್ಲ.
ಕಳ್ಳ ಸಿಗದೆ ಬರಿಗೈಲಿ ಬಂದ ಟೋಲ್ ಸಿಬ್ಬಂದಿ ಕಾರು ಪರಿಶೀಲನೆ ನಡೆಸಿದಾಗ ಕದ್ದ ಬ್ಯಾಗ್, ಚಾಕು ಹಾಗೂ ಕತ್ತರಿ ಪತ್ತೆಯಾಗಿದೆ. ಬ್ಯಾಗ್ನಲ್ಲಿ ಕದ್ದ ಬಂಗಾರ, ಬೆಳ್ಳಿ ಇರುವ ಶಂಕೆ ವ್ಯಕ್ತವಾಗಿದೆ. ಸದ್ಯ ಇಳಕಳ್ ಪೊಲೀಸರು ಬ್ಯಾಗ್ ಅನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಕಾರು ಬೆಂಗಳೂರು ಆರ್ಟಿಒ ಕಚೇರಿಯಲ್ಲಿ ರಿಜಿಸ್ಟರ್ ಆಗಿರುವ ನಂ.ಕೆಎ 01 ಎಂಸಿ 0973 ಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅನಸಾರಿ ಎಂಬುವರ ಹೆಸರಿನಲ್ಲಿ ಕಾರು ನೋಂದಣಿಯಾಗಿದೆ. ಆರೋಪಿ ಕದ್ದ ಕಾರನ್ನು ಬಳಸಿಕೊಂಡು ಕಳ್ಳತನ ಮಾಡುತ್ತಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಸದ್ಯ ಪರಾರಿಯಾಗಿರುವ ಕಳ್ಳನ ಪತ್ತೆಗೆ ಇಳಕಲ್ ಪೊಲೀಸರು ಬಲೆ ಬೀಸಿದ್ದಾರೆ. ಈ ದೃಶ್ಯ ಟೋಲ್ ಗೇಟ್ಗೆ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಒಂಟಿ ಮಹಿಳೆ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ: ಒಂಟಿ ಮಹಿಳೆಯ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಕಳ್ಳತನ ಮಾಡಿರುವ ಘಟನೆ ನಗರದ ಅಕ್ಕಿ ಕಾಲೋನಿಯಲ್ಲಿ ಕಳೆದ ಡಿಸೆಂಬರ್ನಲ್ಲಿ ನಡೆದಿತ್ತು. ಹಲ್ಲೆಗೊಳಾದವರನ್ನು ನಿರ್ಮಲಾ ಸಪ್ಪಡ್ಲಿ ಎಂದು ಗುರುತಿಸಲಾಗಿದೆ. ಮಹಿಳೆ ಮೇಲೆ ಹಲ್ಲೆ ಮಾಡಿದ ನಂತರ ಮನೆಯಲ್ಲಿದ್ದ 40 ಗ್ರಾಂ ಚಿನ್ನಾಭರಣ ಹಾಗೂ 25ಸಾವಿರ ನಗದು ಸೇರಿದಂತೆ ಇತರೆ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಘಟನೆಯಲ್ಲಿ ದುರ್ಷ್ಕಮಿಗಳು ಮಹಿಳೆ ತಲೆಗೆ ಕಬ್ಬಿಣದ ರಾಡ್ನಿಂದ ಹೊಡೆದಿದ್ದರು. ಈ ವೇಳೆ ತೀವ್ರ ರಕ್ತ ಸ್ರಾವದಿಂದ ಬಳಲುತ್ತಿದ್ದ ನಿರ್ಮಲಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಇದನ್ನೂ ಓದಿ: ವಿಜಯಪುರ: ಮನೆಯಲ್ಲಿದ್ದ ಒಂಟಿ ಮಹಿಳೆ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ, ದರೋಡೆ
80 ಲಕ್ಷ ರೂ ಕಿತ್ತುಕೊಂಡು ಪರಾರಿ: ಪೊಲೀಸರ ಸೋಗಿನಲ್ಲಿ ಬಂದ ಆಗಂತುಕರು 80 ಲಕ್ಷ ರೂಪಾಯಿ ದೋಚಿದ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿತ್ತು. ತುಕೂರಿನಿಂದ ಸೇಲಂಗೆ ಕಾರಿನಲ್ಲಿ ಹಣ ಕೊಂಡೊಯ್ಯುತ್ತಿದ್ದ ಕುಮಾರಸ್ವಾಮಿ ಹಾಗೂ ಅವರ ಚಾಲಕ ಚಂದನ್ ಎಂಬವರನ್ನು ಅಡ್ಡಗಟ್ಟಿದ ಮೂವರು ಅಪರಿಚಿತರು ಕೃತ್ಯ ಎಸಗಿದ್ದರು.
ಇದನ್ನೂ ಓದಿ: ಬೆಂಗಳೂರು: ಪೊಲೀಸರ ಸೋಗಿನಲ್ಲಿ ಲಾಠಿ ತೋರಿಸಿ 80 ಲಕ್ಷ ರೂ ಕಿತ್ತುಕೊಂಡು ಪರಾರಿ!