ವಿಜಯಪುರ: ಕೋವಿಡ್-19 ಗೆ ಸಂಬಂಧಪಟ್ಟಂತೆ ವಿಜಯಪುರ ಜಿಲ್ಲೆ ರೆಡ್ ಝೋನ್‍ದಲ್ಲಿರುವುದರಿಂದ ಈಗಾಗಲೇ ಜಾರಿಯಲ್ಲಿರುವ ಚಟುವಟಿಕೆಗಳು ಮುಂದುವೆರೆಯಲಿವೆ. ಯಾವುದೇ ರೀತಿಯ ಹೆಚ್ಚುವರಿ ಮತ್ತು ಹೊಸ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿಗಳ ವಿಡಿಯೋ ಸಂವಾದದ ಮೂಲಕ ಸಂಜೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆ ರೆಡ್ ಝೋನ್ ವ್ಯಾಪ್ತಿಯಲ್ಲಿ ಬರುವುದರಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಹೆಚ್ಚುವರಿ ಮತ್ತು ಹೊಸ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದಿಲ್ಲ. ಈಗ ಜಾರಿಯಲ್ಲಿರುವ, ಕೃಷಿ, ರೇಷ್ಮೆ, ಎ.ಪಿ.ಎಂ.ಸಿ, ತೋಟಗಾರಿಕೆ ಸೇರಿದಂತೆ ಇತರೆ ಚಟುವಟಿಕೆಗಳು ಸರ್ಕಾರದ ಪರಿಸ್ಕೃತ ಆದೇಶದಂತೆ ಅವಕಾಶಗಳು ಮತ್ತು ಚಟುವಟಿಕೆಗಳು ಮಾತ್ರ ಜಾರಿಯಲ್ಲಿ ಇರಲಿವೆ ಎಂದು ತಿಳಿಸಿದ್ದಾರೆ.
ನಗರದ, ರತ್ನಾಪೂರ ಕಂಟೈನ್ಮೆಂಟ್ ಝೋನ್‍ಗಳಲ್ಲಿನ ಜನರು ಹೊರಗೆ ಬರದೆ ಜಿಲ್ಲಾಡಳಿತದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಹಕರಿಸುವಂತೆ ಮನವಿ ಮಾಡಿರುವ ಅವರು, ನಿಗದಿಪಡಿಸಿದ ನಿಯಮಗಳನ್ನು ಪಾಲಿಸದೆ ಇದ್ದಲ್ಲಿ ಇನ್ನೂ ಹೆಚ್ಚಿನ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ. ಸದ್ಯಕ್ಕೆ ಈ ವಲಯಗಳಲ್ಲಿ ಜಿಲ್ಲಾಡಳಿತದಿಂದ ನೀಡಲಾಗುವ ಸೌಲಭ್ಯಗಳು ಮುಂದುವರೆಯಲಿದ್ದು, ಸಾರ್ವಜನಿಕರು ಆತಂಕ ಪಡದೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಬಂದಿರುವ 1866 ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ. 378 ಜನರು 28 ದಿನಗಳನ್ನು ಪೂರ್ಣಗೊಳಿಸಿದ್ದಾರೆ. 1486 ಜನರು ಕ್ವಾರಂಟೈನ್‍ದಲ್ಲಿದ್ದಾರೆ. 1795 ಗಂಟಲು ದ್ರವ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರಲ್ಲಿ 1544 ನೆಗೆಟಿವ್ ವರದಿ ಬಂದಿದೆ.
41 ಪಾಸಿಟಿವ್ ವರದಿ ಬಂದಿದ್ದು, 210 ಪರೀಕ್ಷಾ ವರದಿ ಇನ್ನೂ ಬರಬೇಕಾಗಿದೆ. ಇಂದು ಕಂಡುಬಂದ ಕೋವಿಡ್-19 ಪಾಸಿಟಿವ್ ಪ್ರಕರಣದಲ್ಲಿ ಒಂದು ಪ್ರಕರಣ ರೋಗಿ ಸಂಖ್ಯೆ 221 ಗೆ ಸಂಪರ್ಕದಲ್ಲಿದ್ದ ಬಗ್ಗೆ ದೃಢಪಟ್ಟಿದ್ದು, ಎರಡನೇ ಪಾಸಿಟಿವ್ ಪ್ರಕರಣದ ಸಂಪರ್ಕ ಪತ್ತೆ ತೀವ್ರಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಜಿ.ಪಂ ಸಿಇಒ, ಎಸ್ಪಿ ಅನುಪಮ್ ಅಗರವಾಲ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.