ಮುದ್ದೇಬಿಹಾಳ: ಕುಡಿವ ನೀರು ತರಲು ಹೋದ ದಲಿತ ಯುವಕರ ಮೇಲೆ ಸವರ್ಣೀಯರ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸಹ ಸೂಕ್ತ ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ವಿವಿಧ ದಲಿತಪರ ಸಂಘಟನೆ ಮುಖಂಡರು ಆಸ್ಪತ್ರೆಯ ಮುಂಭಾಗ ಗಾಯಳುಗಳೊಂದಿಗೆ ಪ್ರತಿಭಟನೆ ನಡೆಸಿದರು.
ತಾಲೂಕಿನ ಕೋಳೂರ ಗ್ರಾಮದ ಈಶ್ವರ ದೇವಸ್ಥಾನದ ಬಳಿ ಇರುವ ಕುಡಿವ ನೀರಿನ ಟ್ಯಾಂಕಿನಲ್ಲಿ ನೀರು ಪಡೆದುಕೊಳ್ಳಲು ಹೋದ ದಲಿತ ಯುವಕರ ಮೇಲೆ ಈ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಶ್ರೀಕಾಂತ ರಾಮಣ್ಣ ಮಾದರ(18), ಭೀಮಣ್ಣ ರಾಮಣ್ಣ ಮಾದರ(22) ಹಾಗೂ ಹನುಮಂತ ಫಕೀರಪ್ಪ ಮಾದರ(23) ಹಲ್ಲೆಗೊಳಗಾದ ಯುವಕರು ಎಂದು ತಿಳಿದು ಬಂದಿದೆ. ಗ್ರಾಮದ ಸಿದ್ದಯ್ಯ ಶಾಂತಯ್ಯ ಪೂಜಾರಿ ಕುಟುಂಬದವರು ಕೊಡಲಿಯಿಂದ ಈ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಯುವಕರ ಕುಟುಂಬಸ್ಥರು ದೂರಿದ್ದಾರೆ.
ವೈದ್ಯರ ಅಮಾನತಿಗೆ ದಲಿತಪರ ಸಂಘಟನೆಗಳ ಪಟ್ಟು
ಕೋಳೂರಿನಲ್ಲಿ ನಡೆದ ಘಟನೆಯಲ್ಲಿ ಗಾಯಗೊಂಡವರನ್ನು ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ಕರೆತಂದಾಗ ಇಲ್ಲಿನ ವೈದ್ಯರು ಸೂಕ್ತ ಚಿಕಿತ್ಸೆ ನೀಡದೆ, ಕೇವಲ ಬ್ಯಾಂಡೇಜ್ ಸುತ್ತಿ ಜಿಲ್ಲಾಸ್ಪತ್ರೆಗೆ ಕಳಿಸಲು ಮುಂದಾಗಿದ್ದಾರೆ. ದಲಿತರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯವಹಿಸಿರುವ ವೈದ್ಯರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ದಲಿತಪರ ಸಂಘಟನೆಗಳು ಆಗ್ರಹಿಸಿವೆ.
ಇನ್ನು ಈ ವೇಳೆ, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ದಲಿತ ಮುಖಂಡರು ವಿರೋಧ ವ್ಯಕ್ತಪಡಿಸಿದ್ದು, ಸಿಪಿಐ ಆನಂದ ವಾಘಮೋಡೆ ಸ್ಥಳಕ್ಕಾಮಿಸಿ ಗಾಯಾಳುಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದಾರೆ.
ಈ ಘಟನೆ ಬಳಿಕವೂ ದಲಿತ ಮುಖಂಡರು ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ಮುಂದುವರೆಸಿದ್ದು, ವೈದ್ಯರ ವಿರುದ್ಧ ಕ್ರಮ ಜರುಗಿಸುವವರೆಗೂ ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.