ವಿಜಯಪುರ: ದ್ರಾಕ್ಷಿ ಕಣಜ ಎಂದೆ ಗುರುತಿಸಿಕೊಂಡಿರುವ ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಕ್ಕಿಂತಲೂ ಈ ಬಾರಿ ದ್ರಾಕ್ಷಿ ಬೆಳೆಯಲ್ಲಿ ಅಧಿಕ ಇಳುವರಿ ಬಂದಿದೆ. ಇದರಿಂದ ಸಹಜವಾಗಿ ದ್ರಾಕ್ಷಿ ಬೆಳೆಗಾರರು ಸಂತಸ ಪಟ್ಟಿದ್ದು, ಆದರೆ ಒಣದ್ರಾಕ್ಷಿ ಬೆಲೆ ಕುಸಿದಿರುವುದು ಅಷ್ಟೇ ನೋವು ತಂದಿದೆ.
ದೇಶದಲ್ಲಿ ದ್ರಾಕ್ಷಿ ಉತ್ಪಾದನೆಯಲ್ಲಿ ಮಹಾರಾಷ್ಟ್ರ ನಂತರ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕರ್ನಾಟಕದ ವಿಜಯಪುರ ಜಿಲ್ಲೆ ದ್ರಾಕ್ಷಿ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದೆ. ವಿಜಯಪುರ 16,300, ಬೆಳಗಾವಿ 6,100, ಬಾಗಲಕೋಟೆ 4,200 ಹೆಕ್ಟರ್ ಸೇರಿದಂತೆ ಒಟ್ಟು 31,600 ಹೆಕ್ಟರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿಯೇ ಶೇ. 50-60ರಷ್ಟು ದ್ರಾಕ್ಷಿ ಬೆಳೆ ಬೆಳೆಯಲಾಗುತ್ತಿದೆ.
ವಿಶೇಷ ಪ್ಯಾಕೇಜ್ ಘೋಷಣೆಗೆ ಆಗ್ರಹ:
ಸುಮಾರು 2.69 ಲಕ್ಷ ಟನ್ ಬೆಳೆದ ದ್ರಾಕ್ಷಿಯಲ್ಲಿ 67.370 ಟನ್ ಒಣ ದ್ರಾಕ್ಷಿ ಉತ್ಪಾದನೆ ಮಾಡಲಾಗುತ್ತಿದೆ. ಈ ಬಾರಿ ದ್ರಾಕ್ಷಿ ಇಳುವರಿ ಹೆಚ್ಚಾಗಿರುವ ಕಾರಣ ಒಣದ್ರಾಕ್ಷಿ ಸಹ ಹೆಚ್ಚು ಉತ್ಪಾದನೆಯಾಗಿದೆ. ಆದರೆ ಕೋವಿಡ್, ಅಕಾಲಿಕ ಮಳೆ, ಶೀತಲ ಘಟಕದ ಕೊರತೆ, ವಿದೇಶಿ ರಫ್ತು ಸ್ಥಗಿತದಿಂದ ಕೆಜಿಗೆ 50 ರಿಂದ 60 ರೂ. ವರೆಗೆ ಮಾತ್ರ ಬೆಲೆ ದೊರೆಯುತ್ತಿದೆ. ಮೊದಲು 300 - 400ರವರೆಗೆ ಒಣದ್ರಾಕ್ಷಿ ಮಾರಾಟವಾಗುತ್ತಿತ್ತು. ಸರ್ಕಾರ ಮಧ್ಯೆ ಪ್ರವೇಶಿಸಿ ಉಳಿದ ಬೆಳೆಗಾರರಿಗೆ ನೀಡಿದಂತೆ ದ್ರಾಕ್ಷಿ ಬೆಳೆಗಾರರಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎನ್ನುವುದು ದ್ರಾಕ್ಷಿ ಬೆಳೆಗಾರರ ಆಗ್ರಹವಾಗಿದೆ.
ಒಣದ್ರಾಕ್ಷಿ ಮಾರಾಟಕ್ಕೆ ಪರದಾಡುತ್ತಿರುವ ರೈತರು :
ಪ್ರತಿ ಟನ್ ದ್ರಾಕ್ಷಿಗೆ 1.50 ಲಕ್ಷ ರೂ. ಉತ್ಪಾದನಾ ವೆಚ್ಚ ತಗುಲುತ್ತದೆ. ಪ್ರತಿ ಕೆಜಿಗೆ 200 ರೂ. ಬೆಲೆ ಬಂದರೆ ದ್ರಾಕ್ಷಿ ಬೆಳೆಗಾರ ಲಾಭ ಕಾಣಬಹುದು. ಪ್ರತಿವರ್ಷ ಹೆಚ್ಚು ದ್ರಾಕ್ಷಿಯನ್ನು ಒಣಗಿಸಿ ಅದನ್ನು ವಿದೇಶಕ್ಕೆ ರಫ್ತು ಮಾಡಿ ದ್ರಾಕ್ಷಿ ಬೆಳೆಗಾರ ಲಾಭ ಕಾಣುತ್ತಿದ್ದರು. ಮಹಾರಾಷ್ಟ್ರದ ಸಾಂಗಲಿ, ಮಿರಜ್ ಮೂಲಕ ಒಣ ದ್ರಾಕ್ಷಿ ವಿದೇಶಕ್ಕೆ ರಫ್ತು ಆಗುತ್ತಿದ್ದರಿಂದ ಬೆಳೆಗಾರರು ಲಾಭದ ಮುಖ ನೋಡುತ್ತಿದ್ದರು. ಕೋವಿಡ್ನಿಂದಾಗಿ ಮಹಾರಾಷ್ಟ್ರ ಮಾರುಕಟ್ಟೆ ಬಂದ್ ಆಗಿರುವುದು ದ್ರಾಕ್ಷಿ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.
ಓದಿ: ಹಿರೇನಾಗವಲ್ಲಿ ಪ್ರಕರಣ ಬೆನ್ನಲ್ಲೇ ಚಿಕ್ಕನಾಗವಲ್ಲಿ ಕೆರೆಯಲ್ಲಿ ಸ್ಫೋಟಕ ಪತ್ತೆ!
ದ್ರಾಕ್ಷಿ ಬೆಳೆಗಾರರ ಅಭಿವೃದ್ಧಿ ಮಂಡಳಿ ರಚನೆಗೆ ಆಗ್ರಹ :
ನಿಂಬೆ ಅಭಿವೃದ್ಧಿ ಮಂಡಳಿ ರಚನೆ ಮಾಡಿದಂತೆ ದ್ರಾಕ್ಷಿ ಬೆಳೆಗಾರರ ಅಭಿವೃದ್ಧಿ ಮಂಡಳಿ ರಚನೆ ಮಾಡಬೇಕು ಎಂದು ಹಲವು ವರ್ಷಗಳಿಂದ ದ್ರಾಕ್ಷಿ ಬೆಳೆಗಾರರು ಸರ್ಕಾರದ ಎದುರು ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಆದರೆ, ಸರ್ಕಾರ ಈ ವಿಚಾರವಾಗಿ ನಿರುತ್ಸಾಹ ತೋರುತ್ತಿದೆ. ಕನಿಷ್ಠ ಕರ್ನಾಟಕ ವೈನ್ ಬೋರ್ಡ್‌ನ್ನು ದ್ರಾಕ್ಷಿ ಅಭಿವೃದ್ಧಿ ನಿಗಮವನ್ನಾಗಿಯಾದರೂ ಪರಿವರ್ತಿಸಬೇಕು ಎನ್ನುವ ಬೇಡಿಕೆ ಸಹ ಇದೆ. ಅದನ್ನಾದರೂ ಸರ್ಕಾರ ಪರಿಗಣಿಸಿದರೆ ದ್ರಾಕ್ಷಿ ಬೆಳೆಗಾರರು ತಮ್ಮ ಸಮಸ್ಯೆ ಗಳನ್ನು ಅಲ್ಲಿ ಮುಕ್ತವಾಗಿ ಚರ್ಚಿಸಬಹುದಾಗಿದೆ.