ವಿಜಯಪುರ: ಆದಿಚುಂಚನಗಿರಿ ಶ್ರೀಗಳ ಫೋನ್ ಟ್ಯಾಪಿಂಗ್ ಮಾಡಿರುವುದು ನಮ್ಮ ಇಡೀ ಹಿಂದೂ ಸಮಾಜಕ್ಕೆ ಮಾಡಿದ ಅಪಮಾನ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕಿಡಿಕಾರಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಿಚುಂಚನಗಿರಿ ಶ್ರೀಗಳ ಫೋನ್ ಟ್ಯಾಪಿಂಗ್ ಮಾಡಿದ್ದು ಆಶ್ಚರ್ಯ ಹಾಗೂ ನೋವು ತಂದಿದೆ. ಶ್ರೀಗಳ ಫೋನ್ ಟ್ಯಾಪಿಂಗ್ ಮಾಡಿರುವುದು ಕೀಳುಮಟ್ಟದ ರಾಜಕೀಯ. ಫೋನ್ ಟ್ಯಾಪಿಂಗ್ ಮಾಡುವವರಿಗೆ ಶಿಕ್ಷೆ ಆಗಬೇಕು. ಶ್ರೀಗಳ ಫೋನ್ ಟ್ಯಾಪಿಂಗ್ ಹಿಂದೂ ಸಮಾಜಕ್ಕೆ ಅಪಮಾನ. ಫೋನ್ ಟ್ಯಾಪಿಂಗ್ ರಾಜಕೀಯದಲ್ಲಿ ಮಾಡಿದ ವೈಭಿಚಾರವಾಗಿದೆ. ಶ್ರೀಗಳೇನು ದೇಶದ್ರೋಹಿ ಕೆಲಸ ಮಾಡಲ್ಲ. ಇದು ಶೋಭೆ ತರುವ ಕೆಲಸ ಅಲ್ಲ ಎಂದಿದ್ದಾರೆ.
ಇನ್ನು ನೆರೆ ಸಂತ್ರಸ್ತರ ವಿಚಾರದಲ್ಲಿ ತಕ್ಷಣ ಕೇಂದ್ರ ಸರ್ಕಾರ ಪರಿಹಾರ ನೀಡಬೇಕು. ನಾವೇನು ಕೇಂದ್ರ ಸರ್ಕಾರಕ್ಕೆ ಭಿಕ್ಷೆ ಕೇಳುತ್ತಿಲ್ಲ. ರಾಜ್ಯದಿಂದ 25 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದೇವೆ. ತಕ್ಷಣ 5 ಸಾವಿರ ಕೋಟಿ ಹಣ ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಂಸದ ತೇಜಸ್ವಿ ಸೂರ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರಯಿಸಿದ ಅವರು, ಬೇಜವಾಬ್ದಾರಿಯುತ ಹೇಳಿಕೆ ನೀಡುವವರು ಸ್ಥಳಕ್ಕೆ ಬಂದು ನೋಡ್ಲಿ. ಉತ್ತರ ಕರ್ನಾಟಕದ ಬಗ್ಗೆ ಕೀಳುಮಟ್ಟದ ಮಾತು ಕೇಳಲಿಕ್ಕೆ ಜನಪ್ರತಿನಿಧಿಗಳು ಸತ್ತಿಲ್ಲ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗ ಧ್ವನಿ ಎತ್ತುತ್ತೇನೆ. ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ಪರಿಹಾರ ಬಂದಿಲ್ಲ. ಉತ್ತರ ಕರ್ನಾಟಕದ ಜನಜೀವನ ಅಸ್ತವ್ಯಸ್ತವಾಗಿದೆ. ತಕ್ಷಣ 5 ಸಾವಿರ ಕೋಟಿ ಹಣ ಕೇಂದ್ರದಿಂದ ಬಿಡುಗಡೆ ಮಾಡಬೇಕು. ಎಲ್ಲ ಸಂಸದರು ಹಾಗೂ ಸಚಿವರು ಪ್ರಧಾನಿ ಮೋದಿ ಹತ್ತಿರ ನಿಯೋಗ ತೆಗೆದುಕೊಂಡು ಹೋಗಬೇಕು. ಇದರಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದರು.