ಮುದ್ದೇಬಿಹಾಳ (ವಿಜಯಪುರ): ಕೊರೊನಾ ವೈರಸ್‌ನಿಂದಾಗಿ ಕಳೆದ ಎರಡೂವರೆ ತಿಂಗಳಿನಿಂದ ಬಾಗಿಲು ಹಾಕಿರುವ ಹೋಟೆಲ್ ಉದ್ಯಮದ ಆರಂಭಕ್ಕೆ ಮತ್ತೆ ಮುನ್ಸೂಚನೆ ಸಿಗುವ ಆಶಾಭಾವನೆ ಹೋಟೆಲ್ ಮಾಲೀಕರು ವ್ಯಕ್ತಪಡಿಸುತ್ತಿದ್ದಾರೆ.
ಸಾಮಾಜಿಕ ಅಂತರ ಪಾಲನೆಯಾಗುವುದಿಲ್ಲ. ಬೇರೆ ರಾಜ್ಯಗಳು, ಜಿಲ್ಲೆಗಳಿಂದ ಬರುವ ಕಾರ್ಮಿಕರು ಬಂದರೆ ಕೊರೊನಾ ವೈರಸ್ ಸಾರ್ವತ್ರಿಕವಾಗಿ ಹರಡುತ್ತದೆ ಎಂಬ ಕಾರಣಕ್ಕೆ ಸಿನೆಮಾ, ಮಾಲ್ ಹಾಗೂ ಹೋಟೆಲ್ಗಳನ್ನು ಬಂದ್ ಮಾಡಲು ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿತ್ತು.
ಆದರೆ, ಇದೀಗ ಹಂತಹಂತವಾಗಿ ಎಲ್ಲ ಉದ್ಯಮಗಳ ಆರಂಭಕ್ಕೆ ಅವಕಾಶ ಮಾಡಿಕೊಟ್ಟಿರುವ ಸರ್ಕಾರ ಜೂ.1 ರಿಂದ ಹೋಟೆಲ್ ಉದ್ಯಮದ ಆರಂಭಕ್ಕೂ ಹಸಿರು ನಿಶಾನೆ ತೋರುವ ನಿರೀಕ್ಷೆಯನ್ನು ಹೋಟೆಲ್ ಮಾಲೀಕರು ಇಟ್ಟುಕೊಂಡಿದ್ದಾರೆ.
ಉಪ ಉತ್ಪನ್ನಗಳಿಗೆ ಹೆಚ್ಚಲಿದೆ ಬೇಡಿಕೆ: ಹೋಟೆಲ್ ಉದ್ಯಮ ಇತರ ಉಪ ಉತ್ಪನ್ನಗಳನ್ನು ಅವಲಂಬಿಸಿದೆ. ಹೋಟೆಲ್ ಆರಂಭವಾದರೆ ರೈತರು ಬೆಳೆದ ತರಕಾರಿ, ಕಿರಾಣಿ ಸಾಮಗ್ರಿ,ಹಾಲು, ಕೋಲ್ಡ್ರಿಂಕ್ಸ್ ಮತ್ತಿತರ ವ್ಯವಹಾರವೂ ಚೇತರಿಕೆ ಕಾಣಲಿದೆ.
ನೀರು ಸಿಗುತ್ತಿಲ್ಲ: ಹೋಟೆಲ್ ಬಂದ್ ಆಗಿದ್ದರಿಂದ ಸಾರ್ವಜನಿಕರಿಗೆ ಕುಡಿಯಲು ನೀರು ಸಿಗದಂತಾಗಿದೆ. ಪ್ರಯಾಣಿಕರು ಮೊದಲು ಬಸ್ ನಿಲ್ದಾಣದಲ್ಲಿ ಇಳಿದ ಕೂಡಲೇ ಅಲ್ಪೋಪಹಾರ ಸೇವನೆಗೆ ಹೋಟೆಲ್ಗಳನ್ನೇ ನಂಬಿಕೊಂಡಿದ್ದರು. ಇದೀಗ ಅದೆಲ್ಲವೂ ಬಂದ್ ಆಗಿದ್ದು ಈ ಉದ್ಯಮವೂ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದೆ.
ಇಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ನೆರವಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕಿತ್ತು. ಅಲ್ಲದೇ ಸಪ್ಲೈಯರ್ಗಳಿಗೆ ಹೋಟೆಲ್ ಮಾಲೀಕರು ಕೊಡುವ ಊಟವೇ ಆಧಾರವಾಗಿದೆ. ಆದರೆ, ಅವರ ಕುಟುಂಬಗಳ ಪೋಷಣೆ ಸಪ್ಲೈಯರ್ಗಳಿಗೆ ಸಾಧ್ಯವಾಗಿಲ್ಲ.
ಪಾರ್ಸೆಲ್‌ಗೆ ಮಾತ್ರ ಅವಕಾಶ: ಸಣ್ಣಪುಟ್ಟ ಹೋಟೆಲ್ಗಳು,ಬೀದಿ ಬದಿ ತಿಂಡಿ ಮಾರುವವರು ಇದೀಗ ಪಾರ್ಸೆಲ್ ಕೊಡಲು ಆರಂಭಿಸಿದ್ದಾರೆ. ಸರ್ಕಾರ ಅದಕ್ಕೆ ಹಸಿರು ನಿಶಾನೆ ತೋರಿದೆಯಾದರೂ ದೊಡ್ಡ ಮಟ್ಟದ ಹೋಟೆಲ್ ಪಾರ್ಸೆಲ್ ಕೊಡುವುದಕ್ಕೆ ಮುಂದಾಗುತ್ತಿಲ್ಲ .ಪಾರ್ಸೆಲ್ ಕೊಟ್ಟರೆ ಲಾಭ ಆಗುವುದಕ್ಕಿಂತ ಹಾಕಿದ ಬಂಡವಾಳವೇ ವಾಪಸ್ ಬರುವುದು ಅನುಮಾನವಾಗಿದೆ ಎನ್ನುತ್ತಾರೆ ಹೋಟೆಲ್ ಮಾಲೀಕರು.
ಈ ಹಿನ್ನೆಲೆ ಹೋಟೆಲ್ ಬಂದ್ ಮಾಡುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಮಾಲೀಕರು ಬಂದಿದ್ದಾರೆ. ತಕ್ಷಣಕ್ಕೆ ಹೋಟೆಲ್ ಆರಂಭವಾದರೂ ನಿರೀಕ್ಷಿತ ಪ್ರಮಾಣದಲ್ಲಿ ಜನರು ಬರುವುದು ಕಷ್ಟಸಾಧ್ಯವಾಗಿದೆ. ಕೊರೊನಾ ಭೀತಿ ಎಲ್ಲರನ್ನೂ ಹೊರಗಡೆ ತಿರುಗಾಡದಂತೆ ಮಾಡಿದೆ.