ವಿಜಯಪುರ: ವರ್ತಕರಿಂದ ಕೃಷಿ ಉತ್ಪನಗಳಿಗೆ ಬೆಂಬಲ ಬೆಲೆ ಸಿಗದೆ ಮೋಸ ಮಾಡ್ತಿದ್ದಾರೆ. ಹೀಗಾಗಿ ರೈತರ ಉತ್ಪನ್ನಗಳನ್ನ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಂಬಲ ಬೆಲೆ ನಿಗದಿ ಪಡಿಸಿ ಖರೀದಿಸಿದೆ. ತೊಗರಿ, ಕಡಲೆ ಸೇರಿದಂತೆ ಹಲವು ಉತ್ಪನ್ನ ಸರ್ಕಾರವು ಖರೀದಿ ಕೇಂದ್ರಗಳ ಮೂಲಕ ಕೊಂಡುಕೊಂಡಿದೆ.
ಆದರೆ ವಿಜಯಪುರ ಜಿಲ್ಲೆಯ ಸುಮಾರು 268 ರೈತರಿಗೆ 2019ರ ಹಣ ಇನ್ನೂ ಬಂದಿಲ್ಲ ಎಂದು ಆರೋಪಿಸಲಾಗಿದೆ. ಸರ್ಕಾರ ಎಪಿಎಂಸಿ ಮಾರುಕಟ್ಟೆ ಮೂಲಕ ಪ್ರತಿ ರೈತರಿಂದ 10 ರಿಂದ 20 ಕ್ವಿಂಟಲ್ವರೆಗೂ ತೊಗರಿ ನೇರವಾಗಿ ಖರೀದಿಸಿದೆ. ಹಲವು ದಿನಗಳಿಂದ ಮಾರಾಟ ಮಾಡಿದ ಹಣ ಕೇಳಿದ್ರೆ ಇಂದು ಬಾ, ಬಾಳೆ ಬಾ ಎಂದು ಅಧಿಕಾರಿಗಳು ಭರವಸೆ ಮಾತುಗಳನ್ನ ಹೇಳುತ್ತಿದ್ದಾರೆ ಎಂದು ರೈತರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಕಳೆದ ವರ್ಷ ವಿಜಯಪುರ ಜಿಲ್ಲೆಯಲ್ಲಿ ಒಟ್ಟು 113 ತೊಗರಿ ಖರೀದಿ ಕೇಂದ್ರ ಆಯಾ ಹೋಬಳಿ, ಪಂಚಾಯತ್ ಮಟ್ಟದಲ್ಲಿ ಜಿಲ್ಲಾಡಳಿತ ಸ್ಥಾಪನೆ ಮಾಡಿತ್ತು. ಇನ್ನು ಪ್ರತಿ ಕ್ವಿಂಟಲ್ ತೊಗರಿಗೆ 6100 ರೂ. ಬೆಂಬಲ ಬೆಲೆ ಕೂಡ ನಿಗದಿ ಪಡಿಸಿತು. ಸರ್ಕಾರ ರೈತರಿಗೆ ಉತ್ತಮ ಬೆಲೆ ನೀಡಲಿದೆ ಅಂದುಕೊಂಡು, ಕಳೆದ 2019 ರ ಜನವರಿಯಲ್ಲಿ ತೊಗರಿ ಮಾರಾಟ ಮಾಡಿದ ರೈತರ ಹಣ ಬಾಕಿ ಉಳಿಸಿಕೊಂಡಿದೆ ಎಂದು ಕೃಷಿಕರು ಆರೋಪ ಮಾಡ್ತಿದ್ದಾರೆ.
ಕಳೆದ ವರ್ಷ ಜಿಲ್ಲೆಯ 87055 ರೈತರಿಂದ 821991 ಕ್ವಿಂಟಲ್ ತೊಗರಿಯನ್ನು ಸರ್ಕಾರ ನೇರವಾಗಿ ಖರೀದಿ ಮಾಡಿದೆ. ಇತ್ತ ಸರ್ಕಾರ ಇದುವರೆಗೂ 86787 ರೈತರಿಗೆ ಮಾತ್ರ ತೊಗರಿ ಹಣ ಜಮಾ ಮಾಡಿದೆ. ಇನ್ನು 268 ರೈತರ ತೊಗರಿ ಹಣ ಬಾಕಿ ಉಳಿಸಿಕೊಂಡಿದೆ. ತೊಗರಿ ನಂಬಿಕೊಂಡು ಮಾಡಿದ ಸಾಲ ಮರುಪಾವತಿಸಲು ಆಗುತ್ತಿಲ್ಲವೆಂದು ರೈತರು ಅಧಿಕಾರಿಗಳ ವಿರುದ್ಧ ಗರಂ ಆಗುತ್ತಿದ್ದಾರೆ. ಈ ಕುರಿತು ಅಧಿಕಾರಿಗಳನ್ನ ಕೇಳಿದ್ರೆ, ಸರ್ಕಾರ ರೈತರಿಗೆ ಅನ್ಯಾಯ ಮಾಡುವುದಿಲ್ಲ. ರೈತರು ನೋಂದಣಿ ಮಾಡಿದ ಬ್ಯಾಂಕ್ ಅಕೌಂಟ್ ನಂಬರ್ ಸೇರಿದಂತೆ ಇತರೆ ದಾಖಲೆಗಳಲ್ಲಿ ಸರಿಯಾದ ಮಾಹಿತಿ ನೀಡದಿರುವುದರಿಂದ ರೈತರಿಗೆ ಜಮಾ ಮಾಡಬೇಕಾದ ಹಣ ಸರಿಯಾದ ಕಾಲಕ್ಕೆ ಹೋಗಿಲ್ಲ. ಅಧಿಕಾರಿಗಳ ಜೊತೆಗೆ ಚರ್ಚಿಸಿ ರೈತರಿಗೆ ಹಣ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ.