ವಿಜಯಪುರ: ರಾಜ್ಯ ನೆರೆ ಪೀಡಿತ ಪ್ರದೇಶಗಳ ಜನರ ನಿರೀಕ್ಷೆಯಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಿಹಾರ ಕಾರ್ಯಗಳನ್ನು ಕೈಗೊಂಡಿದೆ ಎಂದು ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ ಅಭಿಪ್ರಾಯಪಟ್ಟರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ತರ ಕಾರ್ನಾಟಕದಲ್ಲಿ ನೆರೆ ಪೀಡಿತ ಪ್ರದೇಶಗಳಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಕೇಂದ್ರ ಸಚಿವರಿಗೆ ಅಭಿನಂದನೆ ಸಲ್ಲಿಸಿದರು. ಮುಖ್ಯಮಂತ್ರಿಗಳು ಖುದ್ದಾಗಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ, ನೆರೆಗೆ ತುತ್ತಾದ ಸಂತ್ರಸ್ತರಿಗೆ ಮನೆಗಳ ಮರು ನಿರ್ಮಾಣಕ್ಕೆ ತಕ್ಷಣ 5 ಲಕ್ಷ ರೂ. ಮಂಜೂರು ಮಾಡಿದ್ದಾರೆ. ರಾಜ್ಯದಲ್ಲಿ ಪ್ರಥಮವಾಗಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ನೀಡದೇ, ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ಆರ್‌ಟಿಜಿಎಸ್ ಮೂಲಕ 1 ಲಕ್ಷ ರೂ. ವರ್ಗಾವಣೆ ಮಾಡಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ನಾಲ್ಕು ಲಕ್ಷ ಸಂತ್ರಸ್ತರಿಗೆ 100 ಕೋಟಿ ರೂ.ಗಳನ್ನು ನೇರವಾಗಿ ಖಾತೆಗೆ ಜಮಾ ಮಾಡಲಾಗಿದೆ. ಕೃಷಿ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಪರ್ಯಾಯವಾಗಿ ಬೇರೆ ಜಮೀನು ಒದಗಿಸಲು 350 ಎಕರೆ ಜಾಗ ಗುರುಸಲಾಗಿದೆ. ಮಧ್ಯಂತರ ಪರಿಹಾರವಾಗಿ ಕೇಂದ್ರ ಸರ್ಕಾರದಿಂದ 1200 ಕೋಟಿ ಬಿಡುಗಡೆಯಾಗಿದ್ದು, ಪ್ರಾಧಾನಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ಪರಸ್ಪರ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಿ ಕರ್ನಾಟಕದ ನೆರೆ ಸಂತ್ರಸ್ತರ ಆಶಯಗಳಿಗೆ ತಕ್ಕಂತೆ ಪರಿಹಾರ ಬಿಡುಗಡೆ ಮಾಡಿದ್ದಾರೆ. ನೆರೆ ಹಾನಿಯ ಬಗ್ಗೆ ಅಂತಿಮ ವರದಿ ತಲುಪಿದ ಮೇಲೆ ಕೇಂದ್ರದ ತಂಡ ರಾಜ್ಯಕ್ಕೆ ಬಂದು ಪರಿಶೀಲನೆ ನಡೆಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೂ ವಿಜಯಪುರ ನಗರ ಕ್ಷೇತ್ರದ ಶಾಸಕ ಬಸವನಗೌಡ ಯತ್ನಾಳ್ ಅವರು ನೆರೆ ಪರಿಹಾರದ ಕುರಿತು ಜನರ ಪರವಾಗಿ ಮಾತನಾಡಿದ್ದನ್ನು ತಾವು ಸ್ವಾಗತಿಸುತ್ತೇವೆ ಎಂದರು. ಈ ವೇಳೆ ಮಾಜಿ ಶಾಸಕ ರಮೇಶ ಭೂಸನೂರ, ಬಿಜೆಪಿ ಮುಖಂಡ ವಿಜುಗೌಡ ಪಾಟೀಲ, ವಿಜಯಕುಮಾರ್ ಪಾಟೀಲ, ಸಂಗರಾಜ್ ದೇಸಾಯಿ, ರವಿಕಾಂತ ಬಬ್ಲಿ, ಪ್ರಕಾಶ ಅಕ್ಕಲಕೊಟ್ ಮುಂತಾದವರು ಉಪಸ್ಥಿತರಿದ್ದರು.