ವಿಜಯಪುರ: ಪ್ರತಿ ಸಲ ಪ್ರವಾಹ ಭೀತಿ ಎದುರಾದರೆ ಸಾಕು, ಈ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸುತ್ತಿತ್ತು. ಮನೆ-ಜಮೀನು ಬಿಟ್ಟು ಗ್ರಾಮ ತೊರೆದು ಸರ್ಕಾರದ ನಿರಾಶ್ರಿತರ ಕೇಂದ್ರಗಳಲ್ಲಿ ವಾಸಿಸಬೇಕಾಗಿತ್ತು. ಆದರೆ ಗ್ರಾಮಸ್ಥರ ಗೋಳಿಗೆ ಸ್ಪಂದಿಸಿದ್ದ ಜಿಲ್ಲಾಡಳಿತ ಆ ಗ್ರಾಮವನ್ನು ಶಾಶ್ವತ ಸ್ಥಳಾಂತರಕ್ಕೆ ಮುಂದಾಗಿತ್ತು, ಈಗ 6 ತಿಂಗಳ ನಂತರ ಆ ಕನಸು ಸಾಕಾರಗೊಳ್ಳುತ್ತಿದೆ.
ಸಿಂದಗಿ ತಾಲೂಕಿನ ಸಮೀಪದ ಆಲಮೇಲ ಬಳಿಯ ತಾರಾಪುರ ಗ್ರಾಮಕ್ಕೆ ಭೀಮಾನದಿ ಹಿನ್ನೀರಿನ ಪ್ರವಾಹ ಪ್ರತಿ ವರ್ಷ ಕಾಡುತ್ತಿತ್ತು. 2006ರಲ್ಲಿ ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸೊನ್ನ ಬಳಿ ಭೀಮಾನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣ ಮಾಡಲಾಗಿತ್ತು. ಸೊನ್ನ ಬ್ಯಾರೇಜ್ನಲ್ಲಿ ನೀರು ಸಂಗ್ರಹಣೆ ಆರಂಭವಾಗುತ್ತಿದ್ದಂತೆ ಅದರ ಹಿನ್ನೀರಿನ ವ್ಯಾಪ್ತಿಗೆ ಬರುವ ಸಿಂದಗಿ ತಾಲೂಕಿನ ತಾರಾಪುರ ಗ್ರಾಮದೊಳಗೆ ನೀರು ನುಗ್ಗಲು ಆರಂಭಗೊಂಡಿತ್ತು.
ಮಳೆಗಾಲದಲ್ಲಿ ಭೀಮಾನದಿ ಉಕ್ಕಿ ಹರಿದರೆ ತಾರಾಪುರ ಜನ ಹೈರಾಣಾಗುತ್ತಿದ್ದರು. 2008ರಲ್ಲಿ ಪ್ರವಾಹ ಬಂದಾಗ ತಾರಾಪುರ ಸಂಪೂರ್ಣ ಮುಳಗಡೆಯಾಗಿತ್ತು. ಅಂದು ನೀರು ಇಳಿದ ಮೇಲೆ ಗ್ರಾಮಸ್ಥರಿಂದ ಶಾಶ್ವತ ಸ್ಥಳಾಂತರದ ಬೇಡಿಕೆ ಇಡಲಾಗಿತ್ತು.
ಅದರಂತೆ ಕರ್ನಾಟಕ ನೀರಾವರಿ ನಿಗಮದ ವತಿಯಿಂದ ಗ್ರಾಮದಿಂದ 3 ಕಿ.ಮೀ ದೂರದಲ್ಲಿ 18ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡು ಗ್ರಾಮ ಸ್ಥಳಾಂತರಕ್ಕೆ ಸಿದ್ಧತೆ ಮಾಡಿಕೊಂಡಾಗ ಗ್ರಾಮದಲ್ಲಿನ ಭಿನ್ನಾಭಿಪ್ರಾಯದಿಂದ ನಿವೇಶನ ಹಂಚಿಕೆಯಾಗದೇ ಹಾಗೆಯೇ ಉಳಿದಿತ್ತು. 2020ರಲ್ಲಿ ಮತ್ತೊಮ್ಮೆ ಪ್ರವಾಹ ಎದುರಾದಾಗ ತಾರಾಪುರ ಗ್ರಾಮ ಸ್ಥಳಾಂತರದ ಕೂಗು ಕೇಳುತ್ತಿದ್ದಂತೆ ಜಿಲ್ಲಾಡಳಿತ ಗ್ರಾಮಕ್ಕೆ ಆಗಮಿಸಿ ಸ್ಥಳಾಂತರದ ಭರವಸೆ ನೀಡಿತ್ತು.
2020ರಲ್ಲಿ ಉಂಟಾಗಿದ್ದ ಭಾರಿ ಪ್ರವಾಹದಲ್ಲಿ ತಾರಾಪುರ ಗ್ರಾಮದ ವಸ್ತು-ಸ್ಥಿತಿಯನ್ನು ಈಟಿವಿ ಭಾರತ ವರದಿ ಸಹ ಮಾಡಿತ್ತು. ಗ್ರಾಮಸ್ಥರು ತಮಗೆ ಆಗುತ್ತಿರುವ ಸಮಸ್ಯೆ, ಗ್ರಾಮದಲ್ಲಿ ಉಂಟಾಗಿರುವ ನಿವೇಶನ ಹಂಚಿಕೆಯಲ್ಲಿ ತಾರಾಪುರ ಗ್ರಾಮಸ್ಥರಿಗೆ ಆಗಿರುವ ಗೊಂದಲ ಕುರಿತು ವರದಿ ಮಾಡಿತ್ತು.
ಈಗ ಜಿಲ್ಲಾಡಳಿತ ಗ್ರಾಮಸ್ಥರ ಸಮಸ್ಯೆ, ಭಿನ್ನಾಭಿಪ್ರಾಯ, ನಿವೇಶನ ಹಂಚಿಕೆಯಲ್ಲಿನ ತಾರತಮ್ಯ ನಿವಾರಿಸಿ ಈಗ ಪುನರ್ವಸತಿ ಕೇಂದ್ರದಲ್ಲಿ ತಾರಾಪುರ ಜನರನ್ನು ಕರೆ ತರಲು ಪುನರ್ವಸತಿ ಕೇಂದ್ರ ಸೂಚಿಗೊಳಿಸಿದ್ದಾರೆ. ಗ್ರಾಮಸ್ಥರು ತಮ್ಮಲ್ಲಿದ್ದ ಗೊಂದಲ ನಿವಾರಿಸಿಕೊಂಡು ತಾರಾಪುರ ಗ್ರಾಮದಿಂದ ಪುನರ್ವಸತಿ ಕೇಂದ್ರಕ್ಕೆ ಬರಲು ಒಪ್ಪಿದ್ದಾರೆ.
ತಾರಾಪುರದಲ್ಲಿ ಸುಮಾರು 80-100 ಮನೆಗಳಿವೆ. ಕಳೆದ 17 ವರ್ಷಗಳಿಂದ ಶಾಶ್ವತ ಪರಿಹಾರಕ್ಕೆ ಆಗ್ರಹಿಸುತ್ತಿದ್ದ ಗ್ರಾಮಸ್ಥರಿಗೆ ಸದ್ಯ ಪುನರ್ವಸತಿ ಕೇಂದ್ರದಲ್ಲಿ ಮನೆಗಳ ಹಂಚಿಕೆ ಮಾಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಆದರೆ ಮನೆ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ಗ್ರಾಮಸ್ಥರು ಪರಿಹಾರದ ಬೇಡಿಕೆ ಮುಂದಿಟ್ಟಿದ್ದಾರೆ. ಈಗಾಗಲೇ ತಾರಾಪುರ ಗ್ರಾಮದ ಆಸ್ತಿ-ಪಾಸ್ತಿಗಳಿಗೆ ಸರ್ಕಾರ ಪರಿಹಾರ ನೀಡಿರುವ ಕಾರಣ, ಮತ್ತೊಮ್ಮೆ ಪರಿಹಾರ ನೀಡಲು ಸಾಧ್ಯವಿಲ್ಲವೆಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಈಗ ಕನಿಷ್ಠ ಗ್ರಾಮ ತೊರೆಯುವ ಗ್ರಾಮಸ್ಥರಿಗೆ ಮಾನವೀಯ ಆಧಾರದ ಮೇಲೆ ಜಿಲ್ಲಾಡಳಿತ ಸಹಾಯ ಮಾಡುವ ಆಶ್ವಾಸನೆ ನೀಡಿದೆ.