ಮೈಸೂರು: ಜುಬಿಲಂಟ್ ಕಾರ್ಖಾನೆ ತೆರೆಯಲು ಜಿಲ್ಲಾಡಳಿತದಿಂದ ಅನುಮತಿ ನೀಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ಪೌರಕಾರ್ಮಿಕರಿಗೆ ಪುರಭವನದ ಮುಂಭಾಗ ಆಹಾರ ಪದಾರ್ಥಗಳ ಕಿಟ್ ವಿತರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜುಬಿಲಂಟ್ ಕಾರ್ಖಾನೆ ತೆರೆಯಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಅದರಂತೆ ರಾಜ್ಯ ಸರ್ಕಾರ ಅನುಮತಿ ಕೂಡ ನೀಡಿದೆ. ಆದರೆ ಮೈಸೂರು ಜಿಲ್ಲಾಡಳಿತ ಕಾರ್ಖಾನೆಯನ್ನು ಮೊದಲು ಪರಿಶೀಲಿಸಿ ತೆರೆಯಲು ನಿರ್ಧರಿಸಿದ್ದು, ಈ ಸಂಬಂಧ ಇಬ್ಬರು ಅಧಿಕಾರಿಗಳನ್ನು ನೇಮಿಸಿದೆ. ಎಲ್ಲಾ ಪ್ರಕ್ರಿಯೆಗಳನ್ನು ಸಂಪೂರ್ಣಗೊಳಿಸಿದ ನಂತರ ಕಾರ್ಖಾನೆ ತೆರೆಯಲು ಅನುಮತಿ ದೊರೆಯಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರೈತರಿಗೆ ಅನುಕೂಲವಾಗುವಂತೆ ಡಿಸಿಸಿ ಬ್ಯಾಂಕ್ನಿಂದ ಸಾಲ ನೀಡಲಾಗುತ್ತಿದೆ. ರೈತರಿಗೆ ಯಾವುದೇ ತೊಂದರೆ ಎದುರಾಗದಂತೆ ಕಂದಾಯ ಇಲಾಖೆ ಸಚಿವರು ಹಾಗೂ ಕಾರ್ಯದರ್ಶಿಗಳಿಗೆ ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ ಎಂದರು.
ಜೂನ್ 1ರಿಂದ ದೇವಸ್ಥಾನ, ಹೋಟೆಲ್ಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರದ ಸೂಚನೆ ಅನುಸಾರ ರಾಜ್ಯದಲ್ಲಿ ಹೆಚ್ಚುವರಿ ಕ್ರಮಗಳನ್ನು ಅನುಸರಿಸಲಾಗುವುದು ಎಂದರು.