ವಿಜಯಪುರ: ಕೊರೊನಾ ಎಮರ್ಜೆನ್ಸಿ ಹಿನ್ನೆಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ಗೋವಾದಲ್ಲಿನ ಕನ್ನಡಿಗರ ಸ್ಥಿತಿ ಅಯೋಮಯವಾಗಿದೆ. ನಿರಾಶ್ರಿತರ ಕೇಂದ್ರದಲ್ಲಿ ಹಳಸಿದ ಅನ್ನ ತಿನ್ನಲು ಕೊಡುತ್ತಿದ್ದಾರೆ ಎಂದು ಇಲ್ಲಿರುವ ಮಹಿಳೆಯರು ಕಣ್ಣೀರಿಟ್ಟಿದ್ದಾರೆ.
ಜಿಲ್ಲೆಯ ಸಿಂದಗಿ, ಮುದ್ದೇಬಿಹಾಳ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಗೋವಾಕ್ಕೆ ದುಡಿಯಲು ಹೋಗಿದ್ದವರ ಗೋಳು ಕೇಳೋರೆ ಇಲ್ಲದಂತಾಗಿದೆ. ನಮಗೆ ಹಳಸಿದ ಅನ್ನ ಕೊಡುತ್ತಿದ್ದಾರೆ, ನಾವು ಮನುಷ್ಯರಲ್ಲವೇ ಎಂದು ಕಾರ್ಮಿಕರು ಕಣ್ಣೀರಿಟ್ಟಿದ್ದಾರೆ. ಜಿಲ್ಲೆಯ ಸುಮಾರು 300 ಜನರನ್ನು ಗೋವಾದ ಮಾಪ್ಸಾ ಸ್ಟೇಡಿಯಂನಲ್ಲಿ ಗೋವಾ ಸರ್ಕಾರ ಇಟ್ಟಿದ್ದಾರೆ. ಮಕ್ಕಳು, ಗರ್ಭಿಣಿಯರು, ವಯಸ್ಸಾದವರಿಗೂ ಸಹ ಇದೆ ಅನ್ನವೇ ಮೃಷ್ಟಾನ್ನವಾಗಿದೆ. ನಮಗೆ ಸರಿಯಾಗಿ ಊಟವನ್ನೂ ಸಹ ಕೊಡುತ್ತಿಲ್ಲ ಎಂದು ಮಹಿಳೆಯರು ಕಣ್ಣೀರು ಹಾಕಿದ್ದಾರೆ.
ಇನ್ನು ಚುನಾವಣೆ ಬಂದಾಗ ವೋಟ್ ಕೇಳಲು ಬರುವ ಜನ ಪ್ರತಿನಿಧಿಗಳೇ ಈಗೆಲ್ಲಿದ್ದೀರಿ ಎಂದು ಜನರು ಪ್ರಶ್ನಿಸುವಂತಾಗಿದೆ. ನಿಮಗೆಲ್ಲ ಅಷ್ಟು ನಿಯತ್ತಿದ್ದರೆ ಬಸ್ ತಂದು ನಮ್ಮನ್ನು ನಮ್ಮ ನಾಡಿಗೆ ಸೇರಿಸಿ ಎಂದು ಸವಾಲು ಹಾಕಿದ್ದಾರೆ. ನಮಗೆ ನಮ್ಮೂರಿಗೆ ತೆರಳಲು ಬಸ್ ಸೌಲಭ್ಯ ಕೊಡಿಸಿ ಇಲ್ಲವೇ ನಮಗೆ ಒಳ್ಳೆಯ ಊಟವಾದ್ರೂ ಕೊಡಿಸಿ ಎಂದು ಜನರು ಅಂಗಲಾಚುವ ದೃಶ್ಯ ಮನಕಲುಕುವಂತಾಗಿದೆ. ಇನ್ನು ಕರ್ನಾಟಕ ಸರ್ಕಾರ ಗಮನ ಹರಿಸಬೇಕು ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.