ಮುದ್ದೇಬಿಹಾಳ(ವಿಜಯಪುರ) : ತಾಲೂಕಿನ ತಂಗಡಗಿಯ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿಯೊಬ್ಬರಿಗೆ ಕೊರೊನಾ ವೈರಸ್ ತಗುಲಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ನ ಸುತ್ತಮುತ್ತಲಿನ 100 ಮೀಟರ್ ಹಾಗೂ 200 ಮೀಟರ್ ವ್ಯಾಪ್ತಿಯಲ್ಲಿ ಕಂಟೇನ್ಮೆಂಟ್ ಝೋನ್ ಹಾಗೂ ಬಫರ್ ಝೋನ್‌ಗಳನ್ನು ಮಾಡಿ ಸೀಲ್‌ಡೌನ್ ಮಾಡಲಾಗಿದೆ ಎಂದು ತಂಗಡಗಿ ಗ್ರಾಪಂ ಬ್ಯಾಂಕ್‌ನ ಹೊರಗಡೆ ನೋಟಿಸ್ ಅಂಟಿಸಿದೆ.
ಜುಲೈ 17ರಂದು ಬ್ಯಾಂಕ್‌ನ ಸಿಬ್ಬಂದಿವೊಬ್ಬರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜುಲೈ 18ರಿಂದ ಅಗಸ್ಟ್1ರವರೆಗೆ ಅಂಗಡಿ-ಮುಂಗಟ್ಟನ್ನು ಹಾಗೂ ಹೋಟೆಲ್ ಮತ್ತು ಪ್ರತಿ ಬುಧವಾರ ನಡೆಯುವ ಸಂತೆಯನ್ನು ಎರಡು ವಾರಗಳ ಮಟ್ಟಿಗೆ ಪೂರ್ಣ ಬಂದ್ ಮಾಡಿ ಆದೇಶಿಸಿದೆ.
ಸಾರ್ವಜನಿಕರು ವಿನಾಕಾರಣ ರಸ್ತೆಯಲ್ಲಿ ತಿರುಗಾಡಬಾರದು ಮತ್ತು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ನಿಯಮ ಉಲ್ಲಂಘಿಸಿದ ಸಾರ್ವಜನಿಕರಿಗೆ ನಿಯಮಾನುಸಾರವಾಗಿ ದಂಡ ಹಾಕಲಾಗುವುದು ಎಂದು ತಿಳಿಸಲಾಗಿದೆ.
ತಂಗಡಗಿಯಲ್ಲಿ ಕೊರೊನಾ ಪಾಸಿಟವ್ ಬಂದಿರುವುದು ಗ್ರಾಮಸ್ಥರ ನಿದ್ದೆಗೆಡಿಸಿದೆ. ಸಾಕಷ್ಟು ಜನ ಬ್ಯಾಂಕ್‌ನಿಂದ ಹಣ ತೆಗೆದುಕೊಳ್ಳಲು, ಜಮಾ ಮಾಡಲು ಹೋಗಿದ್ದು ಸೋಂಕು ಮತ್ತಷ್ಟು ಜನರಿಗೆ ವ್ಯಾಪಿಸಲಿದೆ ಎಂಬ ಆತಂಕವಿದೆ. ಮುಂಜಾಗ್ರತಾ ಕ್ರಮವಾಗಿ ಬ್ಯಾಂಕ್ ಪ್ರದೇಶದ ಸುತ್ತಮುತ್ತ ಸೀಲ್‌ಡೌನ್ ಮಾಡಿ ಸ್ಯಾನಿಟೈಸರ್ ಸಿಂಪಡಿಸಲಾಗಿದೆ.