ಮುದ್ದೇಬಿಹಾಳ (ವಿಜಯಪುರ): ತಾಲೂಕಿನ ಖಿಲಾರಹಟ್ಟಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಟಗರಿನ ಕಾಳಗ ನೆರೆದ ಗ್ರಾಮಸ್ಥರನ್ನ ಮೈರೋಮಾಂಚನಗೊಳಿಸಿತು.
ತಾಲೂಕಿನ ಖಿಲಾರಹಟ್ಟಿ ಗ್ರಾಮದಲ್ಲಿ ಶ್ರಾವಣ ಮಾಸ ಹಿನ್ನೆಲೆ ಬೀರಲಿಂಗೇಶ್ವರ ಹಾಗೂ ಕಾಡಸಿದ್ದೇಶ್ವರ ಶಾಖಾ ಮಠದ ಆವರಣದಲ್ಲಿ ಕಾಡಸಿದ್ದೇಶ್ವರರ ಪುರಾಣ ಮಂಗಲೋತ್ಸವದ ನಿಮಿತ್ತ ಮದರಿ ಅಭಿಮಾನಿಗಳ ಬಳಗದಿಂದ ಟಗರು ಕಾಳಗ ಹಮ್ಮಿಕೊಳ್ಳಲಾಗಿತ್ತು.
ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಮದರಿ ಟಗರು ಕಾಳಗಕ್ಕೆ ಚಾಲನೆ ನೀಡಿದರು. ಸ್ಪರ್ಧೆಯಲ್ಲಿ ಹೊರ ಜಿಲ್ಲೆಯಿಂದ ಸೇರಿದಂತೆ ಒಟ್ಟು 24 ಟಗರುಗಳು ಭಾಗಿಯಾಗಿದ್ದವು. ಟಗರು ಕಾಳಗ ವೀಕ್ಷಣೆಗೆ ಪರ ಊರಿನಿಂದಲೂ ನೂರಾರು ಮಂದಿ ಜಮಾಯಿಸಿದ್ದರು.
ಖಿಲಾರಹಟ್ಟಿ ಶಿವಮಣಿ ಟಗರು ಚಾಂಪಿಯನ್
24 ಟಗರುಗಳ ಓಪನ್ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಖಿಲಾರಹಟ್ಟಿಯ ಶ್ರೀ ಮನ್ನೀರೇಶ್ವರ ಶಿವಮಣಿ ಟಗರು ಪ್ರಥಮ ಬಹುಮಾನವಾಗಿ 1 ಲಕ್ಷ ರೂ.ಗಳನ್ನು ಗೆದ್ದುಕೊಂಡಿತು. ತೃತೀಯ ಸ್ಥಾನವನ್ನು ದಾವಣಗೆರೆಯ ಬೆಂಗಾಲ್ ಟೈಗರ್ ಟಗರು ಪಡೆದುಕೊಂಡು 40 ಸಾವಿರ ರೂ.ಗಳನ್ನು ಗೆದ್ದುಕೊಂಡಿತು. ರಾಣೆಬೆನ್ನೂರಿನ ಆರ್ & ಆರ್ ಟಗರು ತೃತೀಯ ಸ್ಥಾನ ಪಡೆದು 25 ಸಾವಿರ ರೂ. ಗೆದ್ದುಕೊಂಡಿತು. ಮೈದಾನದಲ್ಲಿ ಕೊಬ್ಬಿದ ಟಗರಿನ ಕಾಳಗ ಕಂಡು ಜನ ಸಂಭ್ರಮಿಸಿದರು.
ಓದಿ: ಕೋವಿಡ್ ನಿಯಮ ಉಲ್ಲಂಘನೆ ಆರೋಪ.. ಹರಿಹರದ ಬೆಸಿಲಿಕಾ ಚರ್ಚ್ ವಿರುದ್ಧ ದೂರು ದಾಖಲು