ವಿಜಯಪುರ: ಜಿಲ್ಲೆಯ ಕ್ರೀಡಾಪಟುಗಳ ಹಲವು ವರ್ಷದ ಕನಸು ಕೊನೆಗೂ ಈಡೇರುವ ಲಕ್ಷಣ ಕಾಣುತ್ತಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಿಸುತ್ತಿದ್ದ ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಆಗಸ್ಟ್ ಅಂತ್ಯಕ್ಕೆ ಕ್ರೀಡಾಪಟುಗಳ ಬಳಕೆಗೆ ಲಭ್ಯವಾಗಲಿದೆ.
ಹೀಗಾಗಿ ಇನ್ನು ಮುಂದೆ ಜಿಲ್ಲಾ ಕ್ರೀಡಾಂಗಣದಲ್ಲಿ ಯಾವುದೇ ಸಾರ್ವಜನಿಕ, ರಾಷ್ಟ್ರೀಯ ದಿನಾಚರಣೆಗೆ ಅವಕಾಶ ಸ್ಥಗಿತಗೊಳ್ಳಲಿದೆ. ಇಲ್ಲಿ ಆಚರಣೆ ಮಾಡಲಾಗುತ್ತಿದ್ದ ಸ್ವಾತಂತ್ರ್ಯೋತ್ಸವ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ಜಿಲ್ಲಾಡಳಿತ ಸಹ ಈಗ ಪರ್ಯಾಯ ಸ್ಥಳ ಹುಡುಕಾಟಕ್ಕೆ ಮುಂದಾಗಿದೆ.
ಜಿಲ್ಲೆಯ ಸೈಕ್ಲಿಸ್ಟ್ಗಳ ಅನುಕೂಲಕ್ಕಾಗಿ ಹೊರವಲಯದಲ್ಲಿ ವೆಲೋಡ್ರಮ್ ನಿರ್ಮಾಣ ಮಾಡಲಾಗುತ್ತಿದೆ. ಅದೇ ರೀತಿ ಅಥ್ಲೆಟಿಕ್ಸ್ಗಳಿಗೂ ನಿತ್ಯ ತರಬೇತಿಗಾಗಿ ಹಾಗೂ ವಿವಿಧ ಕ್ರೀಡೆ ಆಯೋಜನೆಗೆ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಸರ್ಕಾರ ಕೃಷ್ಣಾ ಭಾಗ್ಯ ಜಲ ನಿಗಮ ಹಾಗೂ ಕ್ರೀಡಾ ಇಲಾಖೆ ವತಿಯಿಂದ 5 ಕೋಟಿ ರೂ. ಅನುದಾನದಲ್ಲಿ 2019ರಲ್ಲಿ ನಗರದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಟ್ರ್ಯಾಕ್ ನಿರ್ಮಾಣ ಕಾಮಗಾರಿಗೆ ಮುಂದಾಗಿತ್ತು.
ಇಲ್ಲಿ 400 ಮೀಟರ್ ರನ್ನಿಂಗ್ ಟ್ರ್ಯಾಕ್, ಎರಡು ಲಾಂಗ್ ಜಂಪ್, ಚಿಕ್ಕ ಫುಟ್ಬಾಲ್ ಕ್ರೀಡಾಂಗಣ, ಬಾಸ್ಕೆಟ್ ಬಾಲ್, ಟೆನಿಸ್ ಕೋರ್ಟ್ ಸೇರಿ ಅಥ್ಲೆಟಿಕ್ಸ್ ಕ್ರೀಡೆಗೆ ಮೀಸಲಾಗಿ 6 ತಿಂಗಳ ಅವಧಿಯಲ್ಲಿ ಕಾಮಗಾರಿ ನಿರ್ಮಾಣ ಪೂರ್ಣಗೊಳಿಸಲು ಸೂಚನೆ ನೀಡಲಾಗಿತ್ತು. ಆದರೆ ತಾಂತ್ರಿಕ ತೊಂದರೆಯಿಂದ ಕಾಮಗಾರಿ ವಿಳಂಬವಾಗಿದೆ.
ಆಗಸ್ಟ್ ಅಂತ್ಯದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಪೂರ್ಣಗೊಳ್ಳಲಿದ್ದು, ನಂತರ ಈ ಕ್ರೀಡಾಂಗಣದಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮ ಅಗಲಿ, ಮನೋರಂಜನೆ ಕಾರ್ಯಕ್ರಮ ಅಥವಾ ಪ್ರತಿ ವರ್ಷ ನಡೆಯುತ್ತಿದ್ದ ಸ್ವಾತಂತ್ರ್ಯೋತ್ಸವ, ಗಣರಾಜೋತ್ಸವ, ಕನ್ನಡ ರಾಜೋತ್ಸವ ಕಾರ್ಯಕ್ರಮ ಇನ್ನೂ ಮುಂದೆ ಆಯೋಜನೆ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೆ ಕಾಮಗಾರಿ ನಡೆಯುತ್ತಿರುವ ಕಾರಣ ಈ ಬಾರಿಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಸಹ ಮಹಿಳಾ ವಿಶ್ವವಿದ್ಯಾಲಯದಲ್ಲಿ ಆಯೋಜನೆಗೆ ಜಿಲ್ಲಾಡಳಿತ ನಿರ್ಧರಿಸಿದೆ.
ಜಿಲ್ಲೆಯ ಹೃದಯ ಭಾಗದಲ್ಲಿದ್ದ ಜಿಲ್ಲಾ ಕ್ರೀಡಾಂಗಣ ಹಾಗೂ ಜಿಲ್ಲೆಯ ಜನತೆಗೆ ಅವಿನಾಭಾವ ಸಂಬಂಧವಿದೆ. ಮಕರ ಸಂಕ್ರಾಂತಿಯಲ್ಲಿ ಶ್ರೀ ಸಿದ್ದೇಶ್ವರ ಜಾತ್ರೆಯಲ್ಲಿ ಪ್ರತಿ ವರ್ಷ ನಡೆಯುವ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿತ್ತು. ಇನ್ನೂ ಮುಂದೆ ಆ ವೈಭವ ಇರುವುದಿಲ್ಲ. ಇದಕ್ಕೆ ಪರ್ಯಾಯವಾಗಿ ಪೊಲೀಸ್ ಮೈದಾನ ಆಯ್ಕೆ ಮಾಡಿಕೊಳ್ಳಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.