ಮುದ್ದೇಬಿಹಾಳ: ಕಬ್ಬು ಹೇರಿದ್ದ ಟ್ರ್ಯಾಕ್ಟರ್ ಚಕ್ರ ಸ್ಫೋಟಗೊಂಡ ಪರಿಣಾಮ ಕಬ್ಬಿನ ಟ್ರಾಲಿ ರಸ್ತೆಯಲ್ಲಿ ಉರುಳಿ ಬಿದ್ದ ಘಟನೆ ಪಟ್ಟಣದ ಪಿಲೇಕೆಮ್ಮ ದೇವಸ್ಥಾನದ ಮುಂಬಾಗದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ವಾಹನಗಳು, ಪ್ರಯಾಣಿಕರು, ದಾರಿಹೋಕರು ಕಬ್ಬಿನ ಟ್ರ್ಯಾಕ್ಟರ್ ಪಕ್ಕದಲ್ಲಿರದ ಕಾರಣ ಭಾರಿ ಅನಾಹುತವೊಂದು ತಪ್ಪಿದೆ.
ತಾಲೂಕಿನ ಯಲ್ಲಮ್ಮನ ಬೂದಿಹಾಳದಿಂದ ಯರಗಲ್‌ದ ಬಾಲಾಜಿ ಸಕ್ಕರೆ ಕಾರ್ಖಾನೆಗೆ ಕಬ್ಬು ಹೇರಿಕೊಂಡು ಹೊರಟಿದ್ದ ಟ್ರ್ಯಾಕ್ಟರ್ ಟೈರ್ ಪಿಲೇಕೆಮ್ಮ ದೇವಸ್ಥಾನದ ಮುಂದೆ ಏಕಾಏಕಿ ಬ್ಲಾಸ್ಟ್ ಆಗಿದೆ. ಭಾರ ತಾಳದೇ ಕಬ್ಬಿನ ಟ್ರಾಲಿ ಉರುಳಿ ಬಿದ್ದಿದೆ. ಕೂಡಲೇ ಜಾಗೃತರಾದ ಜನರು ರಸ್ತೆ ಬಿಟ್ಟು ದೂರ ಸರಿದು ಸಂಭವನೀಯ ಅಪಘಾತದಿಂದ ಪಾರಾಗಿದ್ದಾರೆ.
ಕಬ್ಬಿಗಾಗಿ ಮುಗಿಬಿದ್ದ ಜನ
ಕಬ್ಬು ಹೇರಿದ್ದ ಟ್ರ್ಯಾಕ್ಟರ್ ಉರುಳಿ ಬೀಳುತ್ತಲೇ ರಸ್ತೆ ಸಂಚಾರ ಬಂದ್ ಆಯಿತು. ರಸ್ತೆಯಲ್ಲಿಯೇ ಕಬ್ಬು ಬಿದ್ದಿದ್ದರಿಂದ ಸುತ್ತಮುತ್ತಲಿನ ನಿವಾಸಿಗಳು ಕೈಗೆ ಸಿಕ್ಕಷ್ಟು ಕಬ್ಬನ್ನು ಮುಗಿಬಿದ್ದು ತೆಗೆದುಕೊಂಡು ಹೋದರು. ಘಟನೆ ಬಳಿಕೆ ಕೆಲ ಗಂಟೆಗಳ ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ರಸ್ತೆ ಸಂಚಾರ ಸುಗಮಗೊಳಿಸಿದರು.
ರಸ್ತೆ ತಡೆ ನಿರ್ಮಿಸುವಂತೆ ಮನವಿ
ಪಿಲೆಕೆಮ್ಮ ದೇವಸ್ಥಾನ ಬಳಿ ವಾಹನಗಳು ವೇಗವಾಗಿ ತಂಗಡಗಿ ಗ್ರಾಮದ ಕಡೆಗೆ ಸಂಚರಿಸುತ್ತಿವೆ. ಸಮೀಪದಲ್ಲಿಯೇ ಶಾಲೆ ಇದ್ದು ಮಕ್ಕಳು, ಜನರು ಓಡಾಡುತ್ತಾರೆ. ರಸ್ತೆ ತಡೆ ನಿರ್ಮಿಸಿ ಸಂಭವನೀಯ ಅಪಘಾತಗಳನ್ನು ತಪ್ಪಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸ್ಥಳೀಯರು ಮನವಿ ಮಾಡಿದ್ದಾರೆ.