ವಿಜಯಪುರ: ಐಟಿಐ ತರಬೇತುದಾರರಿಗೆ ಸರ್ಕಾರ ಜಾರಿಗೊಳಿಸಿರುವ ಆನ್‌ಲೈನ್ ಪರೀಕ್ಷೆ ಹಾಗೂ ಪರೀಕ್ಷಾ ಶುಲ್ಕ ಹೆಚ್ಚಳ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ನಗರದ ಸಿದ್ದೇಶ್ವರ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರಿಗೆ ಪಾದಯಾತ್ರೆ ಕೈಗೊಂಡ ಎಐಡಿವೈಓ ಸಂಘಟನೆ ಕಾರ್ಯಕರ್ತರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಆನ್‌ಲೈನ್ ಪರೀಕ್ಷೆ ಗೊಂದಲಕ್ಕೆ ಎಡೆಮಾಡಿದೆ. ಪರೀಕ್ಷಾ ಶುಲ್ಕಕ್ಕೆ ಜಿಎಸ್‌ಟಿ ಸೇರಿಸಿರೋದು ಬಡ ವಿದ್ಯಾರ್ಥಿಗಳಿಗೆ ಹೊರೆಯಾಗಿದೆ.
ಅಲ್ಲದೆ ಆನ್‌ಲೈನ್ ಪರೀಕ್ಷಾ ತಯಾರಿ ಕೂಡಾ ನಡೆಸಿಲ್ಲ. ಹೀಗಾಗಿ ಪರೀಕ್ಷಾ ಕೇಂದ್ರದ ಕುರಿತಾಗಿ ಮಾಹಿತಿ ದೊರೆತಿಲ್ಲ. ನೂರು ಕಿ.ಮೀ.ವರೆಗೆ ಪರೀಕ್ಷೆ ಬರೆಯಲು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಕಿಡಿಕಾರಿದರು.
ತಕ್ಷಣವೇ ಆನ್‌ಲೈನ್ ಪರೀಕ್ಷೆ ರದ್ದುಗೊಳಿಸಿ, ಪರೀಕ್ಷಾ ಶುಲ್ಕ ಕಡಿಮೆ ಮಾಡಿ ಜಿಎಸ್‌ಟಿ ಹೇರಿಕೆ ಕಡಿತಗೊಳಿಸುವಂತೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.